ಮೊನಾಕೊ, ಡಿ.02 (DaijiworldNews/PY): ಭಾರತದ ಒಲಿಂಪಿಯನ್ ಅಥ್ಲೀಟ್ ಅಂಜು ಬಾಬಿ ಜಾರ್ಜ್ ಅವರಿಗೆ ದೇಶದ ಪ್ರತಿಭಾನ್ವೇಷಣೆ ಹಾಗೂ ಲಿಂಗ ಸಮಾನತೆಯ ಪ್ರತಿಪಾದನೆಗಾಗಿ ವಿಶ್ವ ಅಥ್ಲೆಟಿಕ್ಸ್ನಿಂದ ವರ್ಷದ ಮಹಿಳೆ ಪ್ರಶಸ್ತಿಯ ಗೌರವ ದೊರಕಿದೆ.
2003 ರ ಆವೃತ್ತಿಯ ವಿಶ್ವ ಚಾಂಪಿಯನ್ಶಿಪ್ನಲ್ಲಿ ಲಾಂಗ್ ಜಂಪ್ ಕಂಚಿನೊಂದಿಗೆ ಪದಕ ಗೆದ್ದ ಏಕೈಕ ಭಾರತೀಯ ಕ್ರೀಡಾಪಟು ಎಂದು ಖ್ಯಾತಿ ಪಡೆದಿರುವ ಅಂಜು ಅವರಿಗೆ ಬುಧವಾರ ಪ್ರಶಸ್ತಿಗೆ ಘೋಷಿಸಲಾಗಿದೆ.
"ಕ್ರೀಡೆಯಲ್ಲಿ ಸಕ್ರಿಯವಾಗಿ ತೊಡಗಿಕೊಂಡಿರುವ ಅಂಜು ಅವರು 2016ರಲ್ಲಿ ಯುವತಿಯರಿಗಾಗಿ ತರಬೇತಿ ಅಕಾಡೆಮಿಯನ್ನು ತೆರೆದಿದ್ದು, ಇದರಲ್ಲಿ ತರಬೆತಿ ಪಡೆದವರು ಈಗಾಗಲೇ ವಿಶ್ವ 20 ವರ್ಷದೊಳಗಿನವರ ಚಾಂಪಿಯನ್ಶಿಪ್ನಲ್ಲಿ ಪದಕ ಗೆದ್ದಿದ್ದಾರೆ" ಎಂದು ವಿಶ್ವ ಅಥ್ಲೆಟಿಕ್ಸ್ ಪ್ರಕಟಣೆಯಲ್ಲಿ ತಿಳಿಸಿದೆ.
"ಭಾರತೀಯ ಅಥ್ಲೆಟಿಕ್ಸ್ ಫೆಡರೇಶನ್ನ ಹಿರಿಯ ಉಪಾಧ್ಯಕ್ಷರಾಗಿ ಲಿಂಗ ಸಮಾನತೆಗೆ ನಿರಂತರ ಧ್ವನಿಯಾಗಿರುವ ಬಾಬಿ ಜಾರ್ಜ್ ಅವರು ಕ್ರೀಡೆಯಲ್ಲಿ ಭವಿಷ್ಯದ ಸಾಧನೆಗಾಗಿ ಶಾಲಾಮಕ್ಕಳಿಗೆ ಮಾರ್ಗದರ್ಶನ ನೀಡುವ ಮೂಲಕ ಕ್ರೀಡಾ ಅಭಿವೃದ್ಧಿಗೆ ನೆರವಾಗಿದ್ದಾರೆ" ಎಂದಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, "ವಿಶ್ವ ಅಥ್ಲೆಟಿಕ್ಸ್ನಿಂದ ವರ್ಷದ ಮಹಿಳೆ ಪ್ರಶಸ್ತಿ ಪಡೆದಿರುವುದು ನಿಜಕ್ಕೂ ಸಂತಸದ ವಿಚಾರ. ಪ್ರತಿದಿನ ಎದ್ದು, ಕ್ರೀಡೆಗಾಗಿ ದುಡಿಯುವುದಕ್ಕಿಂತ ಉತ್ತಮ ಭಾವನೆ ಇನ್ನೊಂದಿಲ್ಲ. ಇದು ಯುವತಿಯರನ್ನು ಕ್ರೀಡೆಯಲ್ಲಿ ಸಕ್ರಿಯ ಹಾಗ ಸಬಲೀಕರಣಗೊಳಿಸಲು ಅನುವು ಮಾಡಿಕೊಡುತ್ತದೆ. ನನ್ನ ಪ್ರಯತ್ನಗಳನ್ನು ಗುರುತಿಸಿದ್ದಕ್ಕಾಗಿ ಧನ್ಯವಾದ" ಎಂದಿದ್ದಾರೆ.