ನವದೆಹಲಿ, ನ 30 (DaijiworldNews/MS): ದಕ್ಷಿಣ ಆಫ್ರಿಕಾದ ಪ್ರಿಟೋರಿಯಾದಲ್ಲಿ ಡಿಸೆಂಬರ್ 3 ರಿಂದ 5 ರವರೆಗೆ ನಡೆಯಬೇಕಿದ್ದ ಕಾಮನ್ವೆಲ್ತ್ ಕುಸ್ತಿ ಚಾಂಪಿಯನ್ಶಿಪ್ ಅನ್ನು ಹೊಸ ಕೋವಿಡ್ ರೂಪಾಂತರಿ ಓಮಿಕ್ರಾನ್ನಿಂದ ಭೀತಿಯಿಂದ ಮುಂದೂಡಲಾಗಿದೆ.
ಟೂರ್ನಮೆಂಟ್ ಅನ್ನು ಮುಂದೂಡಲಾಗಿದೆ, ಪಾಲ್ಗೊಳ್ಳಲು ಉದ್ದೇಶಿಸಿದ್ದ ಪ್ರತಿಯೊಂದು ರಾಷ್ಟ್ರಕ್ಕೂ ಸಂಘಟಕರು ಈ ಬಗ್ಗೆ ಮಾಹಿತಿ ನೀಡಿದ್ದಾರೆ" ಎಂದು ಡಬ್ಲ್ಯುಎಫ್ಐ ಸಹಾಯಕ ಕಾರ್ಯದರ್ಶಿ ವಿನೋದ್ ಥೋಮರ್ ಹೇಳಿದ್ದಾರೆ.
ಫ್ರೀಸ್ಟೈಲ್, ಗ್ರೀಕೊ ರೋಮನ್ ಮತ್ತು ಮಹಿಳಾ ಕುಸ್ತಿ ಹೀಗೆ ಮೂರು ಶೈಲಿಯ ಪ್ರತಿ ವಯೋಮಿತಿಯ ವಿಭಾಗದಲ್ಲಿ ತಲಾ ಎರಡು ಕುಸ್ತಿಪಟುಗಳು ಎರಡು ತಂಡಗಳನ್ನು ಕಣಕ್ಕೆ ಇಳಿಸಲು ಭಾರತದ ಕುಸ್ತಿ ಫೆಡರೇಷನ್ ನಿರ್ಧರಿಸಿತ್ತು. ಹಿರಿಯರ ರಾಷ್ಟ್ರೀಯ ಚಾಂಪಿಯನ್ ಶಿಪ್ನಲ್ಲಿ ಪ್ರತಿ ತೂಕ ವಿಭಾಗದಲ್ಲಿ ಮೊದಲ ಎರಡು ಸ್ಥಾನ ಗಳಿಸಿದವರನ್ನು ಕಣಕ್ಕೆ ಇಳಿಸಲು ನಿರ್ಧರಿಸಲಾಗಿತ್ತು.
ಕುಸ್ತಿಪಟುಗಳ ಮೊದಲ ಬ್ಯಾಚ್ ಮಂಗಳವಾರ ರಾತ್ರಿ ದಕ್ಷಿಣ ಆಫ್ರಿಕಾಗೆ ತೆರಳುವ ನಿರೀಕ್ಷೆ ಇತ್ತು . ದೇಶದ ಪ್ರಮುಖ ಕುಸ್ತಿಪಟುಗಳಾದ ಬಜರಂಗ್ ಪುನಿಯಾ, ರವಿ ದಹಿಯಾ ಮತ್ತು ಅಂಶು ಮಲಿಕ್ ಪಂದ್ಯಾವಳಿಯಿಂದ ಹೊರಗುಳಿಯಲು ನಿರ್ಧರಿಸಿದ್ದರೆ, ಗೀತಾ ಫೋಗಟ್ ಮತ್ತು ಜೂನಿಯರ್ ಕುಸ್ತಿಪಟುಗಳು ವಿಶೇಷವಾಗಿ ಪಾಲ್ಗೊಳ್ಳುವ ಉತ್ಸಾಹದಲ್ಲಿದ್ದರು.
" ಕಾಮನ್ವೆಲ್ತ್ ಕುಸ್ತಿ ಚಾಂಪಿಯನ್ಶಿಪ್ ಮುಂದೂಡಲ್ಪಟ್ಟ ವಿಚಾರವಾಗಿ ಮಾತನಾಡಿದ ಗೀತಾ ಫೋಗಟ್ , " ಇದು ನಿರಾಶಾದಾಯಕವಾಗಿದೆ ಆದರೆ ಸಾಂಕ್ರಾಮಿಕ ರೋಗದಿಂದ ನಾವು ಬದುಕುತ್ತಿರುವ ಸಮಯ ಇದು. ಹೀಗಾಗಿ ಇಂತಹ ಕಠಿಣ ಸಮಯದಲ್ಲಿ ನಾವು ಮಾನಸಿಕವಾಗಿ ಮತ್ತು ದೈಹಿಕವಾಗಿ ಸದೃಢರಾಗಬೇಕು. ಫೆಡರೇಶನ್ ರಾಷ್ಟ್ರೀಯ ಶಿಬಿರವನ್ನು ನಡೆಸುತ್ತದೆ ಎಂದು ನಾನು ಭಾವಿಸುತ್ತೇನೆ ಇದರಿಂದ ನಾವು ನಮ್ಮ ಸಿದ್ಧತೆಗಳನ್ನು ಮುಂದುವರಿಸಬಹುದು" ಎಂದು ಹೇಳಿದ್ದಾರೆ
ಮುಂದಿನ ವರ್ಷ ಮಾರ್ಚ್ನಲ್ಲಿ ಈ ಪಂದ್ಯಾವಳಿ ನಡೆಯಲಿದೆ ಎಂದು ತಿಳಿದು ಬಂದಿದೆ.