ರಾಂಚಿ, ನ. 18 (DaijiworldNews/SM): ಭಾರತ ಮತ್ತು ನ್ಯೂಜಿಲೆಂಡ್ ನಡುವೆ ಸದ್ಯ ಟಿ-20 ಸರಣಿ ನಡೆಯುತ್ತಿದ್ದು, ಎರಡನೇ ಪಂದ್ಯಕ್ಕೆ ಕಂಟಕ ಎದುರಾಗಿದೆ.
ಶುಕ್ರವಾರದಂದು ಪಂದ್ಯ ಆಯೋಜನೆಗೊಂಡಿದ್ದು, ಮುಂದೂಡಬೇಕೆಂಬ ಆಗ್ರಹಗಳು ಕೇಳಿಬರುತ್ತಿವೆ. ಪಂದ್ಯದ ವೇಳೆ ಶೇ. ಐವತ್ತರಷ್ಟು ಪ್ರೇಕ್ಷಕರಿಗೆ ಅವಕಾಶ ನೀಡಬೇಕೆಂಬ ಆಗ್ರಹ ಇದೆ. ಈ ಹಿನ್ನೆಲೆಯಲ್ಲಿ ಜಾರ್ಖಂಡ್ ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಲಾಗಿದೆ. ಈಗಾಗಲೇ ಪಂದ್ಯ ವೀಕ್ಷಣೆಗೆ ಶೇ. 100ರಷ್ಟು ಸೀಟುಗಳು ಭರ್ತಿಯಾಗಿವೆ. ಈ ಹಿನ್ನೆಲೆ ವಕೀಲ ಧೀರಜ್ ಕುಮಾರ್ ಜಾರ್ಖಂಡ್ ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದಾರೆ.
ರಾಜ್ಯದ ದೇವಾಲಯಗಳು, ನ್ಯಾಯಾಲಯಗಳು ಮತ್ತು ಇತರ ಕಚೇರಿಗಳಲ್ಲಿ ಕರೊನಾದಿಂದಾಗಿ ಶೇಕಡಾ 50ರಷ್ಟು ಸಿಬ್ಬಂದಿ ಮಾತ್ರ ಕಾರ್ಯನಿರ್ವಹಿಸುತ್ತಿದ್ದಾರೆ. ಈ ನಡುವೆ ಪಂದ್ಯ ವೀಕ್ಷಣೆಗೆ ಯಾವ ಆಧಾರದಲ್ಲಿ ಶೇ. ನೂರರಷ್ಟು ಪ್ರೇಕ್ಷಕರಿಗೆ ಅವಕಾಶ ನೀಡಲಾಗಿದೆ ಎಂದು ಅವರು ಪ್ರಶ್ನಿಸಿದ್ದಾರೆ. ಅಲ್ಲದೆ, ಒಂದೋ ಪಂದ್ಯ ರದ್ದುಗೊಳಿಸಬೇಕು ಅಥವಾ ಶೇ. 50ರಷ್ಟು ಪ್ರೇಕ್ಷಕರಿಗೆ ಮಾತ್ರ ಅವಕಾಶ ನೀಡಬೇಕೆಂದು ಅವರು ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ.