ಟೋಕಿಯೊ, ಆ 02 (DaijiworldNews/PY): ಟೋಕಿಯೊದಲ್ಲಿ ನಡೆಯುತ್ತಿರುವ 32ನೇ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾರತದ ಮಹಿಳಾ ಹಾಕಿ ತಂಡ ಗಮನಾರ್ಹ ಸಾಧನೆ ತೋರಿದ್ದು, ಭಾರತ ಮಹಿಳೆಯರ ಹಾಕಿ ತಂಡ ಆಸ್ಟ್ರೇಲಿಯಾವನ್ನು ಮಣಿಸಿ ಸೆಮಿಫೈನಲ್ ತಲುಪಿದೆ. ಈ ಮೂಲಕ ಭಾರತಕ್ಕೆ ಮತ್ತೊಂದು ಪದಕ ಖಾತ್ರಿಯಾಗಿದೆ.
ಇಂದು ನಡೆದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಪ್ರಬಲ ಆಸ್ಟ್ರೇಲಿಯಾ ವನಿತೆಯರ ತಂಡವನ್ನು 1-0 ಗೋಲುಗಳಿಂದ ಸೋಲಿಸಿ ಭಾರತದ ವನಿತೆಯರು ಸೆಮಿಫೈನಲ್ ಪ್ರವೇಶಿಸಿದ್ದಾರೆ.
ಆಸ್ಟ್ರೇಲಿಯಾ ವಿರುದ್ದದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಭಾರತದ ಪರ ಗುರ್ಜಿತ್ ಕೌರ್ ಬಾರಿಸಿದ ಗೋಲ್ನಿಂದ ಆಸ್ಟ್ರೇಲಿಯಾ ತಂಡವನ್ನು ಸದೆಬಡಿಯಿತು.
ಈವರೆಗೆ ಭಾರತೀಯ ವನಿತೆಯರ ಹಾಕಿ ತಂಡ ಯಾವುದೇ ಒಲಿಂಪಿಕ್ಸ್ನಲ್ಲಿ ಸೆಮಿಫೈನಲ್ ಹಂತ ಪ್ರವೇಶಿಸುವಲ್ಲಿ ಯಶಸ್ವಿಯಾಗಿರಲಿಲ್ಲ. ಇದೇ ಮೊದಲ ಬಾರಿಗೆ ಭಾರತ ವನಿತೆಯರ ತಂಡ ಒಲಿಂಪಿಕ್ಸ್ನಲ್ಲಿ ಸೆಮಿಫೈನಲ್ ಪ್ರವೇಶಿಸಿದ್ದು, ವ್ಯಾಪಕ ಪ್ರಶಂಸೆ ವ್ಯಕ್ತವಾಗುತ್ತಿದೆ.
ಆಗಸ್ಟ್ 6ರಂದು ನಡೆಯುವ ಸೆಮಿಫೈನಲ್ನಲ್ಲಿ ಭಾರತ ಹಾಗೂ ಅರ್ಜೆಂಟೀನಾ ನಡುವೆ ಪಂದ್ಯಾಟ ನಡೆಯಲಿದೆ. ಇಂದು ಸಂಜೆ ನಡೆಯಲಿರುವ ಮತ್ತೆರಡು ಕ್ವಾರ್ಟರ್ ಫೈನಲ್ ಪಂದ್ಯಗಳಲ್ಲಿ ನೆದರ್ ಲೆಂಡ್ಸ್-ನ್ಯೂಜಿಲೆಂಡ್ ಹಾಗೂ ಸ್ಪೇನ್-ಬ್ರಿಟನ್ ತಂಡಗಳು ಮುಖಾಮುಖಿಯಾಗಲಿವೆ.