ನವದೆಹಲಿ, ಜು.30 (DaijiworldNews/HR): ಟೋಕಿಯೋ ಒಲಂಪಿಕ್ಸ್ ನಲ್ಲಿ ನಡೆದ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಭಾರತದ ಪಿ.ವಿ ಸಿಂಧು ಅವರು ಜಪಾನಿನ ಅಕೇನ್ ಯಮಗುಚಿ ಅವರನ್ನು ಸೋಲಿಸುವ ಮೂಲಕ ಸೆಮಿಫೈನಲ್ ಪ್ರವೇಶಿಸಿದ್ದು, ಭಾರತಕ್ಕೆ ಮತ್ತೊಂದು ಪದಕ ಖಚಿತವಾಗಿದೆ.
ಸಿಂಧು ಮೊದಲ ಸೆಟ್ ಅನ್ನು ಸುಲಭದಲ್ಲಿ ಜಯಿಸಿದ್ದು, ಎರಡನೇ ಸೆಟ್ ನಲ್ಲಿ ಅಕಾನೆ ಯಮಾಗುಚಿ ಭಾರೀ ಸ್ಪರ್ಧೆ ಒಡ್ಡಿದರು. ರೋಮಾಂಚನಕಾರಿಯಾಗಿ ನಡೆದ ಎರಡನೇ ಸೆಟ್ ನ್ನು ಕೂಡಾ ವಶಪಡಿಸಿಕೊಂಡ ಸಿಂಧು ಜಯಗಳಿಸಿದ್ದಾರೆ.
ಇನ್ನು ರಿಯೋ 2016ರ ಬೆಳ್ಳಿ ಪದಕ ವಿಜೇತ ಏಸ್ ಶಟ್ಲರ್ ಪಿ.ವಿ.ಸಿಂಧು ಅವರು ಸೆಮಿ ಫೈನಲ್ ಗೆ ಮುನ್ನಡೆದ ನಂತರ ಮತ್ತೊಂದು ಪದಕದ ಭರವಸೆ ಪಡೆದಿದ್ದಾರೆ.
ಟೋಕಿಯೋ ಒಲಿಂಪಿಕ್ಸ್ ನಲ್ಲಿ ಭಾರತಕ್ಕೆ ಇಂದು ಎರಡು ಪದಕ ಖಚಿತವಾಗಿದ್ದು, ಬಾಕ್ಸಿಂಗ್ ನಲ್ಲಿ ಲವ್ಲೀನಾ ಬರ್ಗೋಹೈನ್ ಕೂಡ ಸೆಮಿ ಫೈನಲ್ ಹಂತ ತಲುಪಿದ್ದಾರೆ.