ಮುಂಬೈ, ಜು 17 (DaijiworldNews/PY): ಐಪಿಎಲ್ ಪಂದ್ಯಗಳ ಬಳಿಕ ರಾತ್ರಿಯ ಸಂದರ್ಭ ನಡೆಯುವ ಪಾರ್ಟಿಗಳ ವಿಚಾರದ ಬಗ್ಗೆ ದಕ್ಷಿಣ ಆಫ್ರಿಕಾ ಮೂಲದ ಚಿಯರ್ ಗರ್ಲ್ ಗೇಬ್ರಿಯೆಲಾ ಪಾಸ್ಕ್ವಾಲೊಟ್ಟೊ ಅವರು ಶಾಕಿಂಗ್ ವಿಚಾರಗಳನ್ನು ತಿಳಿಸಿದ್ದಾರೆ.
ಐಪಿಎಲ್ ಪಂದ್ಯದ ಬಳಿಕ ನಡೆಯುವ ಪಾರ್ಟಿಗಳಲ್ಲಿ ಕ್ರಿಕೆಟಿಗರು ಅಸಭ್ಯವಾಗಿ ವರ್ತಿಸುತ್ತಾರೆ ಎಂದು ಗೇಬ್ರಿಯೆಲಾ ಅವರು ಆರೋಪಿಸಿದ ಕಾರಣ ಅವರನ್ನು ಮುಂಬೈ ತಂಡದ ಚಿಯರ್ ಲೀಡರ್ಸ್ ತಂಡದಿಂದ ವಜಾ ಮಾಡಲಾಗಿದ್ದು, ಇದು ವಿಚಾರ ಭಾರೀ ಸುದ್ದಿಯಾಗಿತ್ತು. ವಜಾಗೊಳಿಸಿದ ಬೆನ್ನಲ್ಲೇ ಗೇಬ್ರಿಯೆಲಾ ಅವರು ಟ್ವೀಟ್ ಮೂಲಕ ಐಪಿಎಲ್ ಮ್ಯಾನೇಜ್ಮೆಂಟ್ ಬಗ್ಗೆ ತಿಳಿಸಿದ್ದರು.
ಐಪಿಎಲ್ ಬಗ್ಗೆ ತನ್ನ ಟ್ವಿಟರ್ ಖಾತೆಯಲ್ಲಿ ಬರೆದುಕೊಂಡ ಗೇಬ್ರಿಯೆಲಾ, "ನನ್ನ ಬ್ಲಾಗ್ ಅನ್ನು ಹಗುರವಾಗಿ ಹಾಗೂ ತಮಾಷೆಯಾಗಿ ತೆಗೆದುಕೊಳ್ಳಬೇಕು. ಗಂಭೀರವಾಗಿ ತೆಗೆದುಕೊಳ್ಳುವ ಅವಶ್ಯಕತೆ ಇಲ್ಲ. ಅಲ್ಲದೇ, ಆ ರೀತಿಯ ಸೀನ್ ಕ್ರಿಯೆಟ್ ಮಾಡಬಾರದು. ನನ್ನ ಬ್ಲಾಗ್ ಕೇವಲ ಕ್ರಿಕೆಟಿಗರನ್ನು ಆಧರಿಸಿಲ್ಲ. ನಾನು ಅವರ ಬಗ್ಗೆ ಕೆಲವು ವಾಕ್ಯಗಳನ್ನು ಬರೆದಿದ್ದೇನೆ. ಇದರಿಂದ ಅವರಿಗೆ ಹೆದರಿಕೆಯಾದಂತೆ ತೋರುತ್ತದೆ" ಎಂದು ಉಲ್ಲೇಖಿಸಿದ್ದಾರೆ.
"ಐಪಿಎಲ್ ಹಾಗೂ ಮುಂಬೈ ಇಂಡಿಯನ್ಸ್ ಮ್ಯಾನೇಜ್ಮೆಂಟ್ ಗೇಬ್ರಿಯಲಾ ವಿಚಾರದಲ್ಲಿ ಮೌನವಹಿಸಲು ತೀರ್ಮಾನಿಸಿತು. ಆದರೆ, ಗೇಬ್ರಿಯಲಾ ಅವರಿಗೆ ಇತರ ಚಿಯರ್ ಲೀಡರ್ಗಳ ಬೆಂಬಲ ಇರುವ ಕಾರಣ ಈ ವಿಚಾರ ತಿಳಿದುಬಂದಿದೆ. ರಾತ್ರಿ ಪಾರ್ಟಿ ನಡೆಯುವ ಸಂದರ್ಭ ಕ್ರಿಕೆಟಿಗರು ನಮ್ಮನ್ನು ಮಾಂಸದ ತುಂಡುಗಳಂತೆ ಪರಿಗಣಿಸುತ್ತಾರೆ. ಅವರು ಕುಡಿದ ಬಳಿಕ ನಮ್ಮನ್ನು ಸ್ಪರ್ಶಿಸಿ ಅನುಚಿತವಾಗಿ ವರ್ತಿಸುತ್ತಿದ್ದರು. ನಾವು ಸುಲಭವಾಗಿ ದೊರೆಯುತ್ತೇವೆ ಎಂದು ಅವರು ಭಾವಿಸಿದ್ದರು" ಎಂದು ಬರೆದುಕೊಂಡಿದ್ದಾರೆ. ಇದಕ್ಕೆ ಮಿಸ್ಟರ್ ಲಿಕ್ಸ್ ಎಂಬವರು ಬೆಂಬಲ ನೀಡಿದ್ದು, ನಾವು ನಿಮ್ಮೊಂದಿಗೆ ನಿಲ್ಲುತ್ತೇವೆ ಎಂದು ಟ್ವೀಟ್ ಮಾಡಿದ್ದಾರೆ.
"ಐಪಿಎಲ್ ಗರ್ಲ್ ಎನ್ನುವ ಟ್ವಿಟರ್ ಖಾತೆಯಿಂದ ಐಪಿಎಲ್ ಬಗ್ಗೆ ಅನುಭವಗಳನ್ನು ಟ್ವೀಟ್ ಮಾಡುವ ವೇಳೆ ಗೇಬ್ರಿಯಲಾ ಅವರು ಗಮನ ಸೆಳೆದಿದ್ದರು. ಇದಾದ ನಂತರ ಅವರು ಅನಾಮಧೇಯ ಬ್ಲಾಗ್ ಬರೆಯಲು ಪ್ರಾರಂಭಿಸಿದರು. ಆ ಬ್ಲಾಗ್ನಲ್ಲಿ ಗೇಬ್ರಿಯೆಲಾ ಅವರು ಕ್ರಿಕೆಟಿಗರು ಹಾಗೂ ಐಪಿಎಲ್ ಪಾರ್ಟಿಗಳ ಬಗ್ಗೆ ಬರೆದಿದ್ದಾರೆ. ಆಕೆಯ ಈ ರೀತಿಯಾದ ನಡತೆಯ ಕಾರಣದಿಂದ ಆಕೆಯನ್ನು ವಜಾಗೊಳಿಸಿ ಮನೆಗೆ ಕಳುಹಿಸಲಾಗಿದೆ" ಎಂದು ಚಿಯರ್ ಲೀಡರ್ವೋರ್ವರು ತಿಳಿಸಿದ್ದಾರೆ.
"ಗೇಬ್ರಿಯೆಲಾ ಅವರು ದಕ್ಷಿಣ ಆಫ್ರಿಕಾದ ಪತ್ರಿಕೆಯೊಂದಕ್ಕೆ ಪ್ರತಿಕ್ರಿಯೆ ನೀಡಿದ್ದು, ನನ್ನನ್ನು ಅಪರಾಧಿ ಎಂಬತೆ ಮನೆಗೆ ಕಳುಹಿಸಲಾಯಿತು. ನಾನು ಡ್ರಗ್ ತೆಗೆದುಕೊಂಡಿದ್ದೇನೆ ಎಂದು ಬಿಂಬಿಸಲಾಯಿತು. ಅಲ್ಲದೇ, ಅದಕ್ಕಿಂದ ದೊಡ್ಡ ಅಪರಾಧ ಮಾಡಿದ್ದೇನೆ ಎಂದು ಪರಿಗಣಿಸಲಾಯಿತು. ಆದರೆ, ನನಗಾದ ಅನುಭವವನ್ನು ಹೇಳಲು ಅವಕಾಶವೇ ನೀಡಲಿಲ್ಲ. ಈ ರೀತಿಯಾದ ಪಾರ್ಟಿಗಳಿಗೆ ಎಲ್ಲಾ ಕಡೆಯಲ್ಲೂ ಕ್ಯಾಮರಾಗಳಿದ್ದವು. ಇದನ್ನೆಲ್ಲಾ ಕ್ಯಾಮರಾ ಗಮನಿಸಿದೆ. ನಮ್ಮನ್ನು ಮಾಂಸದ ತುಂಡುಗಳಂತೆ ನಡೆಸಿಕೊಂಡರು. ನಮಗೆ ಎಲ್ಲಿಗೂ ಒಂಟಿಯಾಗಿ ಹೋಗಲು ಆಗುತ್ತಿರಲಿಲ್ಲ. ಆದರೆ, ನಾನು ಯಾವುದೋ ಓರ್ವ ವ್ಯಕ್ತಿಯ ಕಡೆಗೆ ಬೊಟ್ಟು ಮಾಡಿ ಬರೆದಿಲ್ಲ. ಕ್ರಿಕೆಟಿಗ ದೂರು ನೀಡಿದ್ದಾನೆ ಎಂದರೆ, ತಪ್ಪಿತಸ್ಥ ಆತ್ಮಸಾಕ್ಷಿ ಹೊಂದಿದ್ದಾನೆ ಎಂದು ನಾನು ಭಾವಿಸುತ್ತೇನೆ" ಎಂದು ಹೇಳಿದ್ದಾರೆ.