ಕೋಲ್ಕತ್ತಾ, ಜು. 07 (DaijiworldNews/SM): ಒಲಿಂಪಿಕ್ ನಲ್ಲಿ ಹಾಕಿ ಟೂರ್ನಿಯಲ್ಲಿ ಎರಡು ಬಾರಿ ಚಿನ್ನದ ಪದಕ ವಿಜೇತ ತಂಡದ ಸದಸ್ಯ ಕೇಶವ್ ದತ್(95) ವಯೋಸಹಜ ಕಾಯಿಲೆಗಳಿಂದ ಮೃತಪಟ್ಟಿದ್ದಾರೆ.
ಕೋಲ್ಕತ್ತಾದ ಸಂತೋಷ್ಪುರದಲ್ಲಿರುವ ಅವರ ನಿವಾಸದಲ್ಲಿ ದತ್ ನಿಧನರಾಗಿದ್ದಾರೆ ಎಂದು ತಿಳಿದುಬಂದಿದೆ. 1948 ರ ಲಂಡನ್ ಕ್ರೀಡಾಕೂಟದಲ್ಲಿ ದತ್ ಭಾರತದ ಪರ ಆಟ ಆರಂಭಿಸಿದ್ದರು. ಆ ಸಂದರ್ಭದಲ್ಲಿ ಸ್ವಾತಂತ್ರ್ಯ ನಂತರದ ಭಾರತವು ಮೊದಲ ಚಿನ್ನದ ಪದಕವನ್ನು ಗೆದ್ದುಕೊಂಡಿತ್ತು. ಇದಾದ ಬಳಿಕ ಇವರು ಸದಸ್ಯರಾಗಿದ್ದ ತಂಡ ಎರಡನೇ ಒಲಿಂಪಿಕ್ ಚಿನ್ನವನ್ನು ಹೆಲ್ಸಿಂಕಿಯಲ್ಲಿ 1952 ರಲ್ಲಿ ಗೆದ್ದುಕೊಂಡಿತ್ತು.
ಇನ್ನು ದತ್ ನಿಧನಕ್ಕೆ ಹಾಕಿ ಇಂಡಿಯಾ ಅಧ್ಯಕ್ಷ ಜ್ಞಾನೇಂದ್ರೊ ನಿಂಗೋಂಬಮ್, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸೇರಿದಂತೆ ಅನೇಕರು ಸಂತಾಪ ವ್ಯಕ್ತಪಡಿಸಿದ್ದಾರೆ.