ಲಂಡನ್, ಜು 04 (DaijiworldNews/PY): ಅಂತರಾಷ್ಟ್ರೀಯ ಮಹಿಳಾ ಕ್ರಿಕೆಟ್ನಲ್ಲಿ ಭಾರತ ಮಹಿಳಾ ಏಕದಿನ ಕ್ರಿಕೆಟ್ ತಂಡದ ನಾಯಕಿ ಮಿಥಾಲಿ ರಾಜ್ ಅತೀ ಹೆಚ್ಚು ರನ್ ದಾಖಲಿಸಿದ ಆಟಗಾರ್ತಿಯಾಗಿ ನೂತನ ವಿಶ್ವದಾಖಲೆ ನಿರ್ಮಿಸಿದ್ದಾರೆ.
ಇಂಗ್ಲೆಂಡ್ ವಿರುದ್ದ ನಡೆಯುತ್ತಿರುವ ಏಕದಿನ ಸರಣಿಯಲ್ಲಿ ಮಿಥಾಲಿ ರಾಜ್ ಅವರು ಈ ಸಾಧನೆಗೈದಿದ್ದಾರೆ. ಈ ಮುಖೇನ ಮಿಥಾಲಿ ಅವರು ಇಂಗ್ಲೆಂಡ್ನ ಮಾಜಿ ಆಟಗಾರ್ತಿ ಚಾರ್ಲೋಟ್ ಎಡ್ವರ್ಡ್ಸ್ ದಾಖಲೆ ಮುರಿದಿದ್ದಾರೆ. ಎಲ್ಲಾ ಮಾದರಿಯ ಕ್ರಿಕೆಟ್ನಲ್ಲಿ ಎಡ್ವರ್ಡ್ಸ್ ಅವರು ಪಟ್ಟು 10,273 ರನ್ ಗಳಿಸಿದ್ದರು. ಇದೀಗ ಮಿಥಾಲಿ ರಾಜ್ ಅವರು 10,377 ರನ್ ಬಾರಿಸುವ ಮೂಲಕ ವಿಶ್ವ ಮಹಿಳಾ ಕ್ರಿಕೆಟ್ನ ಕ್ವೀನ್ ಆಗಿ ಮಿಂಚಿದ್ದಾರೆ.
ಹಿಂದಿನ ಏಕದಿನ ಕ್ರಿಕೆಟ್ನಲ್ಲಿ 7,000ರನ್ ಗಳಿಸಿದ ಮೊದಲ ಮಹಿಳಾ ಆಟಗಾರ್ತಿ ಎಂದು ಗುರುತಿಸಿಕೊಂಡಿದ್ದ ಮಿಥಾಲಿ ರಾಜ್ ಅವರು, ಈಗ ಎಲ್ಲಾ ಮಾದರಿಯ ಕ್ರಿಕೆಟ್ನಲ್ಲಿ 10,000 ರನ್ನ ಗಡಿದಾಟಿದ್ದಾರೆ. ಈ ಮೂಲಕ ಮಿಥಾಲಿ ರಾಜ್ ಅವರು 10,000 ರನ್ ಗಡಿದಾಟಿದ ಮಹಿಳಾ ಕ್ರಿಕೆಟ್ನ ಎರಡನೇ ಆಟಗಾರ್ತಿಯಾಗಿ ಗುರುತಿಸಿಕೊಂಡಿದ್ದಾರೆ.
ಮಿಥಾಲಿ ರಾಜ್ ಅವರು ಒಟ್ಟು 317 ಪಂದ್ಯಗಳಲ್ಲಿ 10,377 ರನ್ ಬಾರಿಸಿದ್ದರೆ, ಚಾರ್ಲೋಟ್ ಎಡ್ವರ್ಡ್ಸ್ 309 ಪಂದ್ಯಗಳಲ್ಲಿ 10,273 ರನ್ ಗಳಿಸಿದ್ದಾರೆ. ಈಗಾಗಲೇ ಎಡ್ವರ್ಡ್ ಅವರು ಅಂತಾರಾಷ್ಟ್ರೀಯ ಕ್ರಿಕೆಟ್ಗೆ ನಿವೃತ್ತಿ ನೀಡಿದ್ದಾರೆ.