ಇಂಗ್ಲೆಂಡ್, ಜೂ. 18 (DaijiworldNews/SM): ಐತಿಹಾಸಿಕ ಪಂದ್ಯ ಎಂದೇ ಬಿಂಬಿತವಾಗಿರುವ ಭಾರತ ಹಾಗೂ ನ್ಯೂಜಿಲ್ಯಾಂಡ್ ನಡುವಿನ ಬಹುನಿರೀಕ್ಷಿತ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಪಂದ್ಯಕ್ಕೆ ಮಳೆರಾಯನ ಕಾಟ ಎದುರಾಗಿದ್ದು, ಮೊದಲ ದಿನವನ್ನು ವರುಣ ನುಂಗಿದೆ.
144 ವರ್ಷಗಳ ಇತಿಹಾಸವಿರುವ ಟೆಸ್ಟ್ ಕ್ರಿಕೆಟ್ ನ ಮೊಟ್ಟ ಮೊದಲ ಚಾಂಪಿಯನ್ ಷಿಪ್ ನ ಫೈನಲ್ ಪಂದ್ಯಕ್ಕೆ ವೇದಿಕೆ ಸಿದ್ಧಗೊಂಡಿತ್ತು. ಇನ್ನೇನೂ ಪಂದ್ಯ ಆರಂಭವಾಯಿತೆಂದು ಕೊಂಡಷ್ಟರಲ್ಲಿ ವರುಣ ಇನ್ನಿಲ್ಲದ ಕಾಡಲಾರಂಭಿಸಿದ್ದಾನೆ. ಇನ್ನೊಂದೆಡೆ ಗುರುವಾರದಿಂದಲೇ ಮಳೆಯಾಗುತ್ತಿರುವ ಕಾರಣದಿಂದಾಗಿ ಪಂದ್ಯದ ಟಾಸ್ ಕೂಡ ನಡೆದಿಲ್ಲ.
ಮತ್ತೊಂದೆಡೆ ಲಾಕ್ ಡೌನ್ ಸಂದರ್ಭದಲ್ಲಿ ಸಮಯವನ್ನು ಕಳೆಯಲು ಉತ್ತಮ ಅವಕಾಶವೆಂದು ಕ್ರಿಕೆಟ್ ಅಭಿಮಾನಿಗಳು ಅಂದುಕೊಂಡಿದ್ದರು. ಆದರೆ, ಅವರಿಗೆ ನಿರಾಸೆಯುಂಟಾಗಿದೆ.
ಸದ್ಯ ಮಳೆಯ ಆರ್ಭಟ ಕಡಿಮೆಯಾಗಿರುವ ಬಗ್ಗೆ ವರದಿಯಾಗಿದೆ. ಆದರೆ, ಪಂದ್ಯ ಆರಂಭಿಸಬೇಕಾದರೆ, ಮೈದಾನವನ್ನು ಸಜ್ಜುಗೊಳಿಸಬೇಕಾಗುತ್ತದೆ. ಈಗಾಗಲೇ ಮೊದಲ ಸೆಷನ್ ಬಲಿಯಾಗಿದ್ದು, ಮತ್ತೆ ಮಳೆ ಮುಂದುವರೆದಲ್ಲಿ ಎರಡನೇ ಸೆಷನ್ ಕೂಡ ಬಲಿಯಾಗುವ ಸಾಧ್ಯತೆ ಇದೆ.