ದೆಹಲಿ, ಮೇ 21 (DaijiworldNews/SM): ಕೊರೋನಾ ಕಾರಣದಿಂದಾಗಿ 2021ರ ಏಷ್ಯಾ ಕಪ್ ಟೂರ್ನಿ ಅಧಿಕೃತವಾಗಿ ಮುಂದೂಡಲಾಗಿದ್ದು, 2022ರಲ್ಲಿ ಆಯೋಜನೆಯಾಗುವ ಸಾಧ್ಯತೆ ಇದೆ. ಇದರ ಆತಿಥ್ಯ ವಹಿಸಲು ಪಾಕಿಸ್ತಾನ ಆಸಕ್ತಿ ತೋರಿದೆ.
ಆ ಮೂಲಕ ಸತತವಾಗಿ 2022 ಮತ್ತು 23ರಲ್ಲಿ ಟೂರ್ನಿ ನಡೆಯುವ ಸಾಧ್ಯತೆಗಳಿವೆ. ಈಗಾಗಲೇ 2023ರಲ್ಲಿ ನಡೆಯಲಿರುವ ಟೂರ್ನಿಗೆ ಶ್ರೀಲಂಕಾ ಆತಿಥ್ಯ ವಹಿಸುವುದು ಬಹುತೇಕ ಖಚಿತವಾಗಿದೆ. ಈ ನಡುವೆ ಮುಂದಿನ ವರ್ಷ ನಡೆಯಲಿರುವ ಟೂರ್ನಿಯ ಆತಿಥ್ಯ ವಹಿಸಲು ಪಾಕಿಸ್ತಾನ ಆಸಕ್ತಿ ತೋರಿದೆ ಎನ್ನಲಾಗಿದೆ. ಇನ್ನು ಈ ವರ್ಷ ಏಷ್ಯಾ ಕಪ್ ಟೂರ್ನಿ ನಡೆಯಬೇಕಿತ್ತು. ಒಂದೊಮ್ಮೆ ಟೂರ್ನಿ ನಡೆದಿದ್ದರೆ, ವರ್ಷಾಂತ್ಯದಲ್ಲಿ ನಡೆಯಲಿರುವ ಟಿ-೨೦ ವಿಶ್ವ ಕಪ್ ಟೂರ್ನಿಗೆ ಅಭ್ಯಾಸ ನಡೆಸಿದಂತಾಗುತ್ತಿತ್ತು. ಆದರೆ, ಏಷ್ಯಾಕಪ್ ಟೂರ್ನಿಯೇ ಮುಂದೂಡಲ್ಪಟ್ಟಿದೆ.
ಏಷ್ಯಾ ಕಪ್ ಕಳೆದ ವರ್ಷವೇ ಆಯೋಜನೆಗೆ ಸಜ್ಜಾಗಿತ್ತು ಆದರೆ ಕೊರೋನಾ ಹಿನ್ನೆಲೆಯಲ್ಲಿ ಈ ವರ್ಷಕ್ಕೆ ಮುಂದೂಡಲ್ಪಟ್ಟಿತ್ತು. ಡಬ್ಲ್ಯುಟಿಸಿ ಫೈನಲ್ಸ್ ಜೂನ್ನಲ್ಲಿ ನಡೆಯದೆ ಹೋಗಿದ್ದರೆ ಏಷ್ಯಾ ಕಪ್ ಅನ್ನು ಈ ವರ್ಷದ ಜೂನ್ ನಲ್ಲಿ ಆಯೋಜಿಸಲು ಶ್ರೀಲಂಕಾ ಪ್ರಯತ್ನಿಸುತ್ತಿತ್ತು ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿ(ಪಿಸಿಬಿ) ಅಧ್ಯಕ್ಷ ಎಹ್ಸಾನ್ ಮಣಿ ತಿಳಿಸಿದ್ದರು.