ಮುಂಬೈ, ಮೇ.18 (DaijiworldNews/PY): ಮುಂದಿನ ಇಂಗ್ಲೆಂಡ್ ಸರಣಿಗೆ ಭಾರತ ಮಹಿಳಾ ಕ್ರಿಕೆಟ್ ತಂಡದ ಬ್ಯಾಟಿಂಗ್ ಕೋಚ್ ಆಗಿ ಟೀಂ ಇಂಡಿಯಾದ ಮಾಜಿ ಆರಂಭಿಕ ಆಟಗಾರ ಶಿವಸುಂದರ್ ದಾಸ್ ಅವರನ್ನು ಬ್ಯಾಟಿಂಗ್ ಕೋಚ್ ಆಗಿ ನೇಮಕ ಮಾಡಲಾಗಿದೆ.
ಶಿವಸುಂದರ್ ದಾಸ್ ಅವರು ಭಾರತದ ಪರ 23 ಟೆಸ್ಟ್ ಪಂದ್ಯಗಳನ್ನಾಡಿದ್ದಾರೆ. 35 ಸರಾಸರಿಯಲ್ಲಿ 1,300 ರನ್ ಗಳಿಸಿದ್ದಾರೆ. ಟೆಸ್ಟ್ ಮಾದರಿಯಲ್ಲಿ ಎರಡು ಶತಕ ಹಾಗೂ ಒಂಭತ್ತು ಅರ್ಧಶತಕಗಳನ್ನು ಬಾರಿಸಿದ್ದಾರೆ.
ಕಳೆದ ಕೆಲವು ವರ್ಷಗಳಿಂದ ಶಿವಸುಂದರ್ ದಾಸ್ ಅವರು ಎನ್ಸಿಎಯಲ್ಲಿ ರಾಹುಲ್ ದ್ರಾವಿಡ್ ಡಿ ಬ್ಯಾಟಿಂಗ್ ಕೋಚ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಕೆಲ ದಿನಗಳ ಹಿಂದೆಯಷ್ಟೇ ರಮೇಶ್ ಪೊವಾರ್ ಅವರನ್ನು ಭಾರತ ಮಹಿಳಾ ಕ್ರಿಕೆಟ್ ತಂಡಕ್ಕೆ ಮುಖ್ಯ ಕೋಚ್ ಆಗಿ ನೇಮಕ ಮಾಡಲಾಗಿತ್ತು. ಭಾರತ ತಂಡ ದಕ್ಷಿಣ ಆಫ್ರಿಕಾದ ವಿರುದ್ದ ಹೀನಾಯವಾಗಿ ಸೋತ ನಂತರ ಈ ಹಿಂದೆ ಕೋಚ್ ಆಗಿದ್ದ ವಿವಿ ರಾಮನ್ ಅವರನ್ನು ಹುದ್ದೆಯಿಂದ ತೆಗೆಯಲಾಗಿತ್ತು.
ಇಂಗ್ಲೆಂಡ್ ಪ್ರವಾಸಕ್ಕಾಗಿ ಭಾರತೀಯ ಮಹಿಳಾ ಕ್ರಿಕೆಟ್ ತಂಡವನ್ನು ಈಗಾಗಲೇ ಬಿಸಿಸಿಐ ಪ್ರಕಟಿಸಿದ್ದು, ಏಕದಿನ ಹಾಗೂ ಟೆಸ್ಟ್ ತಂಡವನ್ನು ಮಿಥಾಲಿ ರಾಜ್ ಅವರು ಮುನ್ನಡೆಸಿದರೆ, ಟಿ20 ತಂಡವನ್ನು ಹರ್ಮನ್ಪ್ರೀತ್ ಕೌರ್ ಮುನ್ನಡೆಸಲಿದ್ದಾರೆ.