ಅಹಮದಾಬಾದ್, ಮೇ 04 (DaijiworldNews/MB) : ಆಟಗಾರರಲ್ಲಿ ಕೊರೊನಾ ಸೋಂಕು ದೃಢಪಡುತ್ತಲಿರುವ ಹಿನ್ನೆಲೆಯಲ್ಲಿ 2021 ನೇ ಸಾಲಿನ 14ನೇ ಆವೃತ್ತಿಯ ಐಪಿಎಲ್ ಪಂದ್ಯವನ್ನು ರದ್ದು ಮಾಡಲಾಗಿದೆ ಎಂದು ಬಿಸಿಸಿಐ ಮಹತ್ವದ ನಿರ್ಧಾರವನ್ನು ಪ್ರಕಟಿಸಿದೆ.
ಎಪ್ರಿಲ್ 9 ರಂದು ಐಪಿಎಲ್ ಪಂದ್ಯವು ಎಂ.ಎ. ಚಿದಂಬರಂ ಮೈದಾನದಲ್ಲಿ ಆರಂಭಗೊಂಡಿದೆ. ಆದರೆ ಸೋಮವಾರವಷ್ಟೇ ಐಪಿಎಲ್ ನ ಒಂದು ತಂಡವಾದ ಕೋಲ್ಕತ್ತ ನೈಟ್ ರೈಡರ್ಸ್ನ ಇಬ್ಬರು ಆಟಗಾರರಾದ ವರುಣ್, ಸಂದೀಪ್ಗೆ ಕೊರೊನಾ ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ಸೋಮವಾರದ ನಡೆಯಲಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ಮತ್ತು ಕೋಲ್ಕತ್ತ ನೈಟ್ ರೈಡರ್ಸ್ (ಕೆಕೆಆರ್) ನಡುವಿನ ಪಂದ್ಯವನ್ನು ಮುಂದೂಡಲಾಗಿತ್ತು.
ಆ ಬಳಿಕ ಇಂದು ಸನ್ರೈಸರ್ಸ್ ಹೈದರಾಬಾದ್ನ ವೃದ್ಧಿಮಾನ್ಗೆ ಕೂಡಾ ಕೊರೊನಾ ದೃಢಪಟ್ಟಿದೆ. ಹಾಗೆಯೇ ದೆಲ್ಲಿ ಕ್ಯಾಪಿಟಲ್ನ ಅಮಿತ್ ಮಿಶ್ರಾಗೆ ಸೋಂಕು ದೃಢಪಟ್ಟಿದೆ. ಈ ಹಿನ್ನೆಲೆ ಪಂದ್ಯ ರದ್ದು ಮಾಡಲಾಗಿದೆ.
ಈ ಬಗ್ಗೆ ಸುದ್ದಿ ಸಂಸ್ಥೆಯೊಂದಕ್ಕೆ ಮಾಹಿತಿ ನೀಡಿರುವ ಬಿಸಿಸಿಐ ಉಪಾಧ್ಯಕ್ಷ ರಾಜೀವ್ ಶುಕ್ಲಾ, ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನ 2021 ರ ಆವೃತ್ತಿಯನ್ನು ಸದ್ಯಕ್ಕೆ ಅಮಾನತುಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ.