ದುಬೈ, ಮಾ. 29 (DaijiworldNews/SM): ಪುಣೆಯಲ್ಲಿ ಐಸಿಸಿ ವಿಶ್ವಕಪ್ ಸೂಪರ್ ಲೀಗ್ ಸರಣಿಯನ್ನು ಟೀಂ ಇಂಡಿಯಾ ಗೆದ್ದುಕೊಂಡಿದೆ. ಆ ಮೂಲಕ ವಿಶ್ವ ಚಾಂಪಿಯನ್ ವಿರುದ್ಧ ಗೆಲುವು ದಾಖಲಿಸಿದ ದಾಖಲೆ ಬರೆದಿದೆ. ಅಂಕಪಟ್ಟಿಯಲ್ಲಿ ಭಾರತಕ್ಕೆ 29 ಅಂಕಗಳು ಲಭಿಸಿವೆ.
ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಕ್ರೀಡಾಂಗಣದಲ್ಲಿ ಭಾರತ ಭಾನುವಾರ ಇಂಗ್ಲೆಂಡ್ ತಂಡವನ್ನು 7 ರನ್ ಗಳಿಂದ ಸೋಲಿಸಿ ಸರಣಿಯನ್ನು 2-1ರಿಂದ ಗೆದ್ದುಕೊಂಡಿತು.
ಈ ಗೆಲುವಿನೊಂದಿಗೆ ಭಾರತ ತಂಡದ ಅಂಕ 29ಕ್ಕೆ ತಲುಪಿದೆ. ಇದರೊಂದಿಗೆ ಟೀಂ ಇಂಡಿಯಾ ಏಳನೇ ಸ್ಥಾನದಲ್ಲಿದೆ. ಈ ನಡುವೆ ಭಾರತ ಪ್ರಬಲ ಎದುರಾಳಿ ಪಾಕಿಸ್ತಾನ ಒಂದು ಸ್ಥಾನ ಕುಸಿತಗೊಂಡಿದ್ದು, ಎಂಟನೇ ಸ್ಥಾನದಕ್ಕೆ ತೃಪ್ತಿ ಪಟ್ಟುಕೊಳ್ಳುವಂತಾಗಿದೆ.
ಐಸಿಸಿ ವಿಶ್ವಕಪ್ ಕ್ರಿಕೆಟ್ 2023 ರ ಅರ್ಹತಾ ಪಂದ್ಯವಾದ ಸೂಪರ್ ಲೀಗ್ ನಲ್ಲಿ ಮೊದಲ ಸ್ಥಾನದಲ್ಲಿ ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ಕಾಣಿಸಿಕೊಂಡಿದೆ. ಈಗಾಗಲೇ ತಲಾ 40 ಪಾಯಿಂಟ್ ಗಳಿಸಿದ್ದು, ವಿಶ್ವಕಪ್ ಹಾದಿ ಸುಗಮಗೊಳಿಸಿಕೊಂಡಿದೆ. ಇನ್ನುಳಿದಂತೆ ನ್ಯೂಜಿಲೆಂಡ್, ಅಫ್ಘಾನಿಸ್ತಾನ, ಬಾಂಗ್ಲಾದೇಶ ಮತ್ತು ವೆಸ್ಟ್ ಇಂಡೀಸ್ ತಂಡಗಳು 30 ಅಂಕ ಹೊಂದಿವೆ. ಎಲ್ಲಾ ತಂಡಗಳಿಗೆ ತವರು ಹಾಗೂ ವಿದೇಶಗಳಲ್ಲಿ ತಲಾ ನಾಲ್ಕು ಪಂದ್ಯಗಳನ್ನಾಡಬೇಕಾದ ಅನಿವಾರ್ಯತೆ ಇದೆ. ಇನ್ನು ಭಾರತ ತಂಡ ಅತಿಥ್ಯ ಹೊಂದಿರುವ ಕಾರಣ ನೇರ ಅರ್ಹತೆ ಪಡೆಯಲಿದೆ.