ಪುಣೆ, ಮಾ. 23 (DaijiworldNews/SM): ಇಲ್ಲಿನ ಮಹಾರಾಷ್ಟ್ರ ಕ್ರಿಕೆಟ್ ಅಸೋಶಿಯೇಷನ್ ಮೈದಾನದಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯವನ್ನು ಟೀಂ ಇಂಡಿಯಾ 66ರನ್ ಗಳಿಂದ ಗೆದ್ದು ಬೀಗಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಗೆ ಇಳಿಸಲ್ಪಟ್ಟ ಟೀಂ ಇಂಡಿಯಾ ನಿಗಧಿತ ಐವತ್ತು ಓವರ್ ಗಳಲ್ಲಿ ಐದು ವಿಕೆಟ್ ಗಳ ನಷ್ಟಕ್ಕೆ 317 ರನ್ ಗಳಿಸಿತು. ಆರಂಭಿಕ ಆಟಗಾರ ರೋಹಿತ್ ಶರ್ಮಾ ಅವರ ಬ್ಯಾಟ್ ನಿಂದ ನಿರೀಕ್ಷಿತ ಆಟ ಪ್ರದರ್ಶನವಾಗದೆ, 28 ರನ್ ಗಳಿಸಿ ನಿರ್ಗಮಿಸಿದರು. ಬಳಿಕ ಶಿಖರ್ ಧವನ್ ತಂಡಕ್ಕೆ ನೆರವಾಗಿದ್ದು, ಶತಕದ ಅಂಚಿನಲ್ಲಿ ಎಡವಿದರು. 98 ರನ್ ಗಳಿಸಿ ನಿರ್ಗಮಿಸಿದರು. ನಾಯಕ ವಿರಾಟ್ ಕೊಹ್ಲಿ 56, ಕೆ.ಎಲ್. ರಾಹುಲ್ 62, ಕೃಣಲ್ ಪಾಂಡ್ಯ 58 ರನ್ ಗಳಿಸಿದರು. ಅಂತಿಮವಾಗಿ ಟಿಂ ಇಂಡಿಯಾ ಇಂಗ್ಲೆಂಡ್ ತಂಡಕ್ಕೆ ಗೆಲ್ಲಲು 318 ರನ್ ಗಳ ಗುರಿ ನೀಡಿತು. ಇನ್ನು ಇಂಗ್ಲೆಂಡ್ ಪರ ಸ್ಟೋಕ್ಸ್ 3, ಮಾರ್ಕ್ ವುಡ್ 2 ವಿಕೆಟ್ ಪಡೆದರು.
ಇದಕ್ಕೆ ಉತ್ತರವಾಗಿ ಬ್ಯಾಟಿಂಗ್ ಗೆ ಇಳಿದ ಇಂಗ್ಲೆಂಡ್ ತಂಡಕ್ಕೆ ಉತ್ತಮ ಆರಂಭ ಲಭಿಸಿತು. ಇಂಗ್ಲೆಂಡ್ ಪರ ಜೆಸನ್ ರಾಯ್ 46, ಜೋನಿ ಬೈರ್ಸ್ಟ್ರೋ 94, ಮಾರ್ಗನ್ 22, ಸ್ಯಾಮ್ ಬಿಲ್ಲಿಂಗ್ಸ್ 18, ಮೊಯಿನ್ ಅಲಿ 30 ರನ್ ಗಳಿಸಿದರು. ಅಂತಿಮವಾಗಿ 42.1 ಓವರ್ ಗಳಲ್ಲಿ 251 ರನ್ ಗಳಿಸಿ ಇಂಗ್ಲೆಂಡ್ ತಂಡ ಸರ್ವ ಪತನ ಕಂಡಿತು. ಭಾರತ ಪರ ಪ್ರಸಿದ್ದ್ ಕೃಷ್ಣ 4, ಶಾರ್ದೂಲ್ ಠಾಕೂರ್ 3, ಭುವನೇಶ್ವರ್ ಕುಮಾರ್ 2 ವಿಕೆಟ್ ಪಡೆದು ಮಿಂಚಿದರು.