ಅಹಮದಾಬಾದ್, 25 (DaijiworldNews/MB) : ಮಾಜಿ ಕ್ರಿಕೆಟಿಗ ಚೇತನ್ ಶರ್ಮಾ ಅವರನ್ನು ಭಾರತ ಕ್ರಿಕೆಟ್ ತಂಡದ ಆಯ್ಕೆ ಸಮಿತಿ ಮುಖ್ಯಸ್ಥರನ್ನಾಗಿ ನೇಮಿಸಲಾಗಿದೆ.
ಅಭ್ಯರ್ಥಿಗಳ ಸಂದರ್ಶನ ನಡೆಸಿದ ಮದನ್ಲಾಲ್ ನೇತೃತ್ವದ ಕ್ರಿಕೆಟ್ ಸಲಹಾ ಸಮಿತಿಯು ಆಯ್ಕೆ ಸಮಿತಿಯನ್ನು ನೇಮಿಸಿದೆ.
ಕಳೆದ ವರ್ಷ ಮುಖ್ಯಸ್ಥರಾಗಿ ನೇಮಕವಾಗಿದ್ದ ಕರ್ನಾಟಕದ ಸುನೀಲ್ ಜೋಶಿಯವರು ದಕ್ಷಿಣ ವಲಯದ ಪ್ರತಿನಿಧಿಯಾಗಿ ಮುಂದುವರಿದಿದ್ದಾರೆ. ಇನ್ನು ಈ ಆಯ್ಕೆ ಸಮಿತಿಗೆ ಚೇತನ್ ಶರ್ಮಾರೊಂದಿಗೆ ಮುಂಬೈನ ಅಬೆ ಕುರುವಿಲಾ ಮತ್ತು ಒಡಿಶಾದ ದೇಬಾಶಿಶ್ ಮೊಹಾಂತಿರನ್ನು ಕೂಡಾ ನೇಮಿಸಲಾಗಿದೆ.
54 ವರ್ಷದ ಚೇತನ್ ಶರ್ಮಾರವರು ಭಾರತವನ್ನು ಪ್ರತಿನಿಧಿಸಿ 23 ಟೆಸ್ಟ್ ಪಂದ್ಯಗಳನ್ನು ಆಡಿದ್ದು ಜೋಶಿ 15 ಟೆಸ್ಟ್ಗಳನ್ನು ಆಡಿದ್ದಾರೆ.
ಈ ನೇಮಕಾತಿಯ ಬಗ್ಗೆ ಮಾಹಿತಿ ನೀಡಿರುವ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ, ನಿಯಮಾವಳಿಯ ಪ್ರಕಾರ ಹೆಚ್ಚು ಟೆಸ್ಟ್ಗಳನ್ನು ಆಡಿರುವ ಸದಸ್ಯರಿಗೆ ಮುಖ್ಯಸ್ಥ ಹುದ್ದೆ ನೀಡಲಾಗುತ್ತದೆ. ಒಟ್ಟು ಟೆಸ್ಟ್ ಪಂದ್ಯಗಳನ್ನು ಆಡಿರುವ ಹಿರಿತನದ ಆಧಾರದಲ್ಲಿ ಶರ್ಮಾರಿಗೆ ಮುಖ್ಯಸ್ಥರ ಸ್ಥಾನ ನೀಡಲು ಸಮಿತಿ ಶಿಫಾರಸು ಮಾಡಲಾಗಿದೆ ಎಂದು ಹೇಳಿದರು.
ತಾನು ಭಾರತ ಕ್ರಿಕೆಟ್ ತಂಡದ ಆಯ್ಕೆ ಸಮಿತಿ ಮುಖ್ಯಸ್ಥನಾಗಿ ನೇಮಕವಾಗಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಚೇತನ್ ಶರ್ಮಾ, ಈ ಅವಕಾಶ ನೀಡಿರುವ ಮಂಡಳಿಗೆ ಧನ್ಯವಾದ ಸಲ್ಲಿಸುತ್ತೇನೆ ಎಂದರು.
ಇನ್ನು ಈ ನೂತನ ಸಮಿತಿಯು ಮುಂದಿನ ತಿಂಗಳು ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ಆಡಲಿರುವ ಭಾರತ ತಂಡವನ್ನು ಆಯ್ಕೆ ಮಾಡಲಿದೆ.