ಸಿಡ್ನಿ, ಡಿ. 08 (DaijiworldNews/SM): ಇಲ್ಲಿನ ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ನಡೆದ 3ನೇ ಹಾಗೂ ಅಂತಿಮ ಟಿ-20 ಪಂದ್ಯವನ್ನು ಆಸ್ಟ್ರೇಲಿಯಾ ಗೆದ್ದುಕೊಂಡಿದ್ದು, ಆ ಮೂಲಕ ಕ್ಲೀನ್ ಸ್ವೀಪ್ ನಿಂದ ತಪ್ಪಿದಂತಾಗಿದೆ. ಆಸಿಸಿ ವಿರುದ್ಧ ಭಾರತ ತಂಡ 12 ರನ್ ಗಳ ಸೋಲು ಕಂಡಿದೆ.
ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ ಭಾರತ ತಂಡಕ್ಕೆ ಗೆಲ್ಲಲು 187 ರನ್ ಗಳ ಬೃಹತ್ ಗುರಿ ನೀಡಿತು. ಆಸಿಸ್ ನೀಡಿದ ಗುರಿ ಬೆನ್ನತ್ತಿದ ಭಾರತ ತಂಡ ನಿಗಧಿತ 20 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 174 ರನ್ ಗಳನ್ನು ಮಾತ್ರ ಗಳಿಸಲು ಶಕ್ತವಾಯಿತು. ಆ ಮೂಲಕ ಆಸ್ಟ್ರೇಲಿಯಾ ವಿರುದ್ಧ 12 ರನ್ ಗಳ ಸೋಲು ಕಂಡಿತು.
ಭಾರತದ ಪರ ಆರಂಭಿಕ ಕೆಎಲ್ ರಾಹುಲ್ ಖಾತೆ ತೆರಯದೆ ಮರಳಿದರು. ಈ ಹಂತದಲ್ಲಿ ಕ್ರೀಸ್ ಗೆ ಆಗಮಿಸಿದ ವಿರಾಟ್ ಕೊಹ್ಲಿ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಕೇವಲ 61 ಎಸೆತಗಳಲ್ಲಿ 85 ರನ್ ಗಳಿಸಿದರು. ಆದಕೆ ಕೊಹ್ಲಿ ತಂಡದ ಇತರೆ ಬ್ಯಾಟ್ಸ್ ಮನ್ ಗಳಿಂದ ಉತ್ತಮ ಪ್ರದರ್ಶನ ಬರಲಿಲ್ಲ. ಶಿಖರ್ ಧವನ್ 28 ರನ್ ಗಳಿಸಿ ಔಟ್ ಆದರೆ, ಸಂಜು ಸ್ಯಾಮ್ಸನ್ 10 ರನ್ ಗಳಿಸಿ ನಿರ್ಗಮಿಸಿದರು. ಶ್ರೇಯಸ್ ಅಯ್ಯರ್ ಶೂನ್ಯ ಸುತ್ತಿದರೆ, ಹಾರ್ದಿಕ್ ಪಾಂಡ್ಯಾ ಹೋರಾಟ 20 ರನ್ ಗಳಿಸಿ ನಿರ್ಗಮಿಸಿದರು. ಅಂತಿಮವಾಗಿ ಭಾರತ ತಂಡ 20 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 174 ರನ್ ಮಾತ್ರ ಗಳಿಸಿ 12 ರನ್ ಗಳ ಅಂತರದಲ್ಲಿ ಸೋಲು ಕಂಡಿತು.