ಸಿಡ್ನಿ, ಡಿ. 07 (DaijiworldNews/SM): ಆಸಿಸ್ ವಿರುದ್ಧದ ಏಕದಿನ ಸರಣಿಯನ್ನು ಕೈ ಚೆಲ್ಲಿದ ಬಳಿಕ ಚುಟುಕು ಸಮರದ ಸವಾರರು ನಾವೇ ಎಂಬಂತೆ ಟಿಂ ಇಂಡಿಯಾ ಈಗಾಗಲೇ ಎರಡು ಪಂದ್ಯಗಳನ್ನು ಗೆದ್ದು ಸರಣಿ ಕೈ ವಶ ಮಾಡಿಕೊಂಡಿದೆ. ಆ ಮೂಲಕ ಏಕದಿನ ಸರಣಿಯ ಸೋಲಿನ ಸೇಡನ್ನು ಚುಟುಕು ಸಮರದ ಮೂಲಕ ತೀರಿಸಿಕೊಂಡಿದೆ.
ಇದೀಗ ಟಿ-20 ಸರಣಿಯ ಅಂತಿಮ ಪಂದ್ಯವೊಂದು ಬಾಕಿ ಉಳಿದಿದ್ದು, ಅದರಲ್ಲೂ ಕೂಡ ಗೆದ್ದು ಬೀಗಿ ಸರಣಿ ಕ್ಲೀನ್ ಚಿಟ್ ಮಾಡಲು ಕೊಹ್ಲಿ ಬಳಗ ಸಿದ್ಧವಾಗಿದೆ. ಆದರೆ, ಮತ್ತೊಂದೆಡೆ ಅಂತಿಮ ಪಂದ್ಯದಲ್ಲಾದರೂ ಗೆಲುವನ್ನು ದಾಖಲಿಸಬೇಕೆನ್ನುವ ಹಠದಲ್ಲಿದೆ ಆಸ್ಟ್ರೇಲಿಯಾ ತಂಡ.
ಏಕದಿನ ಸರಣಿಯನ್ನು ಗಮನಿಸಿದಾಗ ಎರಡು ಪಂದ್ಯಗಳನ್ನು ಭರ್ಜರಿಯಾಗಿ ಗೆದ್ದು ಸರಣಿ ವಶ ಪಡಿಸಿಕೊಂಡ ಬಳಿಕ ಮೂರನೇ ಪಂದ್ಯದಲ್ಲಿ ಭಾರತ ತಂಡ ಗೆಲುವು ದಾಖಲಿಸಿ, ಕ್ಲೀನ್ ಸ್ವೀಪ್ ನಿಂದ ತಪ್ಪಿಸೊಕೊಂಡಿತ್ತು. ಅದೇ ರೀತಿಯಲ್ಲಿ ಟಿ-20 ಸರಣಿಯಲ್ಲೂ ಕೂಡ ಕ್ಲೀನ್ ಸ್ವೀಪ್ ನಿಂದ ಪಾರಾಗಬೇಕಾದ ಅನಿವಾರ್ಯತೆ ಆಸಿಸ್ ಬಳಗಕ್ಕಿದೆ.
ಮತ್ತೊಂದೆಡೆ ಟೀಂ ಇಂಡಿಯಾ ಹಾಗೂ ಆಸಿಸ್ ತಂಡಗಳು ಭರ್ಜರಿ ಬ್ಯಾಟಿಂಗ್ ವಿಭಾಗವನ್ನು ಹೊಂದಿದೆ. ಆದರೆ, ಭಾರತ ತಂಡದಿಂದ ಮಾತ್ರ ಸ್ಥಿರತೆಯ ಪ್ರದರ್ಶನ ಸಿಗದಿರುವುದು ಏಕದಿನ ಸರಣಿ ಸೋಲಿಗೆ ಕಾರಣವಾಗಿದೆ. ಸದ್ಯ ಚುಟುಕು ಸರಣಿಯಲ್ಲಿ ಉತ್ತಮ ಪ್ರದರ್ಶನವನ್ನು ಆಟಗಾರರು ತೋರಿದ್ದು, ಅಂತಿಮ ಪಂದ್ಯವನ್ನು ಗೆಲ್ಲುವ ಆತ್ಮ ವಿಶ್ವಾಸವನ್ನು ಹೊಂದಿದ್ದಾರೆ.
ಇಂದು ಮಧ್ಯಾಹ್ನ 1.40ಕ್ಕೆ ಅಂತಿಮ ಪಂದ್ಯ ಆರಂಭಗೊಳ್ಳಲಿದೆ.