ನವದೆಹಲಿ, ನ. 20 (DaijiworldNews/SM): ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಆಡಬೇಕಾದರೆ ಕನಿಷ್ಠ ವಯೋಮಿತಿ ಅನಿವಾರ್ಯವಾಗಿದೆ. ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ ಕನಿಷ್ಟ ವಯಸನ್ನು ನಿಗದಿಗೊಳಿಸಿದೆ. ಇದರ ಪ್ರಕಾರ ಇಂಟರ್ನ್ಯಾಷನಲ್ ಕ್ರಿಕೆಟ್ ಆಡಬೇಕಾದಲ್ಲಿ 15 ವಯಸ್ಸು ತುಂಬಬೇಕಾಗುತ್ತದೆ.
ಐಸಿಸಿ ಈ ನಿಯಮವನ್ನು ಜಾರಿಗೆ ತಂದಿದೆ. ಆದರೂ ಕೂಡ ದೇಶಗಳು 15 ವರ್ಷಕ್ಕಿಂತ ಕಡಿಮೆ ವಯಸ್ಸಿನ ಆಟಗಾರನನ್ನು ಮೈದಾನಕ್ಕೀಳಿಸಬಹುದಾಗಿದೆ. ಅಸಾಧಾರಣ ಸನ್ನಿವೇಶಗಳಲ್ಲಿ 15 ವರ್ಷಕ್ಕಿಂತ ಕಡಿಮೆ ವಯಸ್ಸಿನ ಆಟಗಾರನಿಗೆ ಆಯಾ ದೇಶಕ್ಕಾಗಿ ಆಡಲು ಅವಕಾಶ ನೀಡಲು ಮಂಡಳಿಗಳು ಐಸಿಸಿಗೆ ಅರ್ಜಿ ಸಲ್ಲಿಸಬಹುದಾಗಿದೆ.
ಐಸಿಸಿ ಸ್ಪರ್ಧೆಗಳು, ದ್ವಿಪಕ್ಷೀಯ ಸರಣಿ ಮತ್ತು 19 ವಯೋಮಿತಿ ಸೇರಿದಂತೆ ಎಲ್ಲಾ ಕ್ರಿಕೆಟ್ನಲ್ಲಿ ಅನ್ವಯವಾಗುವಂತೆ ಆಟಗಾರರ ಸುರಕ್ಷತೆಯನ್ನು ಸುಧಾರಿಸಲು ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಯು ಕನಿಷ್ಠ ವಯಸ್ಸಿನ ನಿರ್ಬಂಧಗಳನ್ನು ಪರಿಚಯಿಸಿರುವುದನ್ನು ದೃಢಪಡಿಸಿದೆ.