ಅಬುಧಾಬಿ, ಅ. 23 (DaijiworldNews/SM): ಇಲ್ಲಿನ ಶಾರ್ಜಾ ಕ್ರಿಕೆಟ್ ಮೈದಾನದಲ್ಲಿ ನಡೆದ ಐಪಿಎಲ್ ಪಂದ್ಯದಲ್ಲಿ ಸರಣಿ ಸೋಲುಗಳಿಂದ ಕಂಗೆಟ್ಟಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡ ಮತ್ತೊಮ್ಮೆ ಮುಖಭಂಗ ಅನುಭವಿಸಿದ್ದು, ಮುಂಬೈ ವಿರುದ್ಧ ಹತ್ತು ವಿಕೆಟ್ ಗಳ ಹೀನಾಯ ಸೋಲನುಭವಿಸಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಗೆ ಇಳಿಯಲ್ಪಟ್ಟ ಚೆನ್ನೈ ತಂಡಕ್ಕೆ ಉತ್ತಮ ಆರಂಭ ಸಿಕ್ಕಿಲ್ಲ. ಗಾಯಕ್ವಾಡ್ ಖಾತೆ ತೆರೆಯದೆ ನಿರ್ಗಮಿಸಿದರೆ, ಡ್ಯುಪ್ಲೆಸಿಸ್ ಒಂದು, ರಾಯುಡ್ ಎರಡು ರನ್ ಗಳಿಸಿ ಮತ್ತೊಮ್ಮೆ ವಿಫಲರಾದರು. ಈ ನಡುವೆ ಸ್ಯಾಮ್ ಕರಣ್ ತಂಡಕ್ಕೆ ನೆರವಾಗಿದ್ದು 52 ರನ್ ಗಳನ್ನು ಸಿಡಿಸಿದರು. ಅಂತಿಮವಾಗಿ 20 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 114 ರನ್ ಗಳಿಸಿದರು.
ಮುಂಬೈ ಪರ ಬೋಲ್ಟ್ ನಾಲ್ಕು, ಬೂಮ್ರಾ, ರಾಹುಲ್ ಚಾಹರ್ ತಲಾ ಎರಡೆರಡು ವಿಕೆಟ್ ಗಳನ್ನು ಪಡೆದರು.
ಇದಕ್ಕೆ ಉತ್ತರವಾಗಿ ಮುಂಬೈ 12.2 ಓವರ್ ಗಳಲ್ಲಿ ವಿಕೆಟ್ ನಷ್ಟವಿಲ್ಲದೆ, 116 ರನ್ ಗಳಿಸಿ ಭರ್ಜರಿ ಜಯ ದಾಖಲಿಸಿತು. ಮುಂಬೈ ಪರ ಇಶಾನ್ ಕಿಶಾನ್ 37 ಎಸೆತಗಳಲ್ಲಿ 6 ಬೌಂಡರಿ ಹಾಗೂ 5 ಸಿಕ್ಸರ್ ನೆರವಿನಿಂದ 68 ರನ್ ಸಿಡಿಸಿದರೆ, ಕ್ಲಿಂಟನ್ ಡಿ ಕಾಕ್ 37 ಎಸೆತಗಳಲ್ಲಿ 5 ಬೌಂಡರಿ ಹಾಗೂ 2 ಸಿಕ್ಸರ್ ನೆರವಿನಿಂದ 46 ರನ್ ಸಿಡಿಸಿದರು.