ಅಬುಧಾಬಿ, ಅ 20 (DaijiworldNews/SM): ಇಲ್ಲಿನ ದುಬೈ ಇಂಟರ್ ನ್ಯಾಷನಲ್ ಕ್ರಿಕೆಟ್ ಮೈದಾನದಲ್ಲಿ ನಡೆದ ಐಪಿಎಲ್ ಪಂದ್ಯದಲ್ಲಿ ಡೆಲ್ಲಿ ಆರಂಭಿಕ ಬ್ಯಾಟ್ಸ್ ಮನ್ ಶಿಖರ್ ಧವನ್ ಮತ್ತೊಮ್ಮೆ ಸಿಡಿದಿದ್ದು, ನಿರಂತರ ಎರಡನೇ ಶತಕ ಸಿಡಿಸಿ ಮಿಂಚಿದ್ದಾರೆ. ಆದರೆ ಪಂದ್ಯವನ್ನು ಉಳಿಸಲು ಸಾಧ್ಯವಾಗಿಲ್ಲ. ಈ ನಡುವೆಯೇ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಐದು ವಿಕೆಟ್ ಗಳಿಂದ ಪಂದ್ಯ ಗೆದ್ದುಕೊಂಡಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಡೆಲ್ಲಿ ಇಪ್ಪತ್ತು ಓವರ್ ಗಳಲ್ಲಿ ಐದು ವಿಕೆಟ್ ಗಳ ನಷ್ಟಕ್ಕೆ 164 ರನ್ ಗಳಿಸಿತು. ಡೆಲ್ಲಿ ಆರಂಭಿಕ ಆಟಗಾರ ಧವನ್ ಮತ್ತೊಮ್ಮೆ ಶತಕ ಸಿಡಿಸಿ ಮಿಂಚಿದರು. 61 ಎಸೆತಗಳನ್ನು ಎದುರಿಸಿದ್ದ ಧವನ್ 12 ಬೌಂಡರಿ ಹಾಗೂ 3 ಸಿಕ್ಸರ್ ಗಳ ನೆರವಿನಿಂದ 106 ರನ್ ಸಿಡಿಸಿ ಅಜೇಯರಾಗಿ ಉಳಿದರು. ಇನ್ನು ಮತ್ತೊಂದೆಡೆ ವಿಕೆಟ್ ಗಳು ಉರುಳುತ್ತಲೇ ಇದ್ದವು. ಅಂತಿಮವಾಗಿ ಪಂಜಾಬ್ ಗೆ 165 ರನ್ ಗುರಿ ನೀಡಿತು.
ಇದಕ್ಕೆ ಉತ್ತರವಾಗಿ ಪಂಜಾಬ್ ನ ಆರಂಭಿಕ ಆಟಗಾರ ನಾಯಕ ರಾಹುಲ್ ನಿರೀಕ್ಷೆಯ ಪ್ರದರ್ಶನ ನೀಡುವಲ್ಲಿ ಎಡವಿದರು. 15 ರನ್ ಗಳಿಸಿ ನಿರ್ಗಮಿಸಿದರು. ಕ್ರಿಸ್ ಗೇಲ್ 29 ರನ್ ಸಿಡಿಸಿದರೆ, ಪೂರನ್ ಅಬ್ಬರಿಸಿದರು. 28 ಎಸೆತಗಳಲ್ಲಿ 6 ಬೌಂಡರಿ ಹಾಗೂ 3 ಸಿಕ್ಸರ್ ಗಳ ನೆರವಿನಿಂದ 53 ರನ್ ಸಿಡಿಸಿದರು. ಮ್ಯಾಕ್ಸ್ ವೆಲ್ 32, ಹೂಡಾ 15, ನೀಶಮ್ 10 ರನ್ ಸಿಡಿಸಿ ತಂಡಕ್ಕೆ ಗೆಲುವು ತಂದುಕೊಟ್ಟರು.