ಅಬುಧಾಬಿ, ಅ. 19 (DaijiworldNews/SM): ಇಲ್ಲಿನ ಶೇಖ್ ಝೈಯ್ಯದ್ ಕ್ರಿಕೆಟ್ ಮೈದಾನದಲ್ಲಿ ನಡೆದ ಐಪಿಎಲ್ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಬ್ಯಾಟಿಂಗ್ ಹಾಗೂ ಬೌಲಿಂಗ್ ವಿಭಾಗದ ವೈಫಲ್ಯದಿಂದ ರಾಜಸ್ಥಾನ ವಿರುದ್ಧ ೭ ವಿಕೆಟ್ ಗಳ ಸೋಲನುಭವಿಸಿದ್ದು, ಐಪಿಎಲ್ ಹದಿಮೂರನೇ ಆವೃತ್ತಿಯಿಂದ ಹೊರ ಬೀಳುವ ಹಂತಕ್ಕೆ ತಲುಪಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಚೆನ್ನೈ ಇಪ್ಪತ್ತು ಓವರ್ ಗಳಲ್ಲಿ ಐದು ವಿಕೆಟ್ ಗಳ ನಷ್ಟಕ್ಕೆ 125 ರನ್ ಸಿಡಿಸಿತು. ಚೆನ್ನೈ ಪರ ಶ್ಯಾಮ್ ಕರಣ್ 22, ಡ್ಯುಪ್ಲೆಸಿಸ್ 10, ಅಂಬಾಟಿ ರಾಯುಡ್ 13, ನಾಯಕ ಧೋನಿ 28, ರವೀಂದ್ರ ಜಡೇಜಾ 35 ರನ್ ಗಳಿಸಿದರು. ಬ್ಯಾಟಿಂಗ್ ವಿಭಾಗದ ವೈಫಲ್ಯದಿಂದಾಗಿ ಮೂರು ಬಾರಿಯ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ತಂಡ ರನ್ ಗಳಿಸಲು ಸಾಧ್ಯವಾಗದೆ ಪರದಾಡುವಂತಾಯಿತು.
ಇನ್ನು ಚೆನ್ನೈ ನೀಡಿದ ಸಾಧಾರಣ ಮೊತ್ತದ ಗುರಿ ಬೆನ್ನತ್ತಿದ ರಾಜಸ್ಥಾನ ತಂಡಕ್ಕೆ ಬಟ್ಲರ್ ನೆರವಾದರು. ಅಜೇಯ 70 ರನ್ ಗಳನ್ನು ಸಿಡಿಸಿ ತಂಡಕ್ಕೆ ಗೆಲುವನ್ನು ತಂದುಕೊಟ್ಟರು. ಇನ್ನುಳಿದಂತೆ ಆರಂಭಿಕರಿಂದ ಉತ್ತಮ ಪ್ರದರ್ಶನ ಸಿಗಲಿಲ್ಲ. ಬೆನ್ ಸ್ಟ್ರೋಕ್ಸ್ 19, ರಾಬಿನ್ ಉತ್ತಪ್ಪ 4 ರನ್ ಗಳಿಸಿ ನಿರ್ಗಮಿಸಿದರು. ಸ್ಟೀವನ್ ಸ್ಮಿತ್ 26 ರನ್ ಸಿಡಿಸಿದರು. ಇನ್ನಿ ಚೆನ್ನೈ ಪರ ದೀಪಕ್ ಚಾಹರ್ ಎರಡು ವಿಕೆಟ್ ಪಡೆದರು. ಇಂದಿನ ಗೆಲುವಿನ ಮೂಲಕ ಟೂರ್ನಿಯಲ್ಲಿ ಮುನ್ನುಗುವ ಆಸೆಯನ್ನು ರಾಜಸ್ಥಾನ ಜೀವಂತವಾಗಿ ಉಳಿಸಿಕೊಂಡಿದೆ. ಮುಂದಿನ ನಾಲ್ಕು ಪಂದ್ಯಗಳಲ್ಲಿ ರಾಜಸ್ಥಾನಕ್ಕೆ ಗೆಲುವು ಅನಿವಾರ್ಯವಾಗಿದೆ.