ಅಬುಧಾಬಿ, ಅ. 15 (DaijiworldNews/SM): ಇಲ್ಲಿನ ಶಾರ್ಜಾ ಕ್ರಿಕೆಟ್ ಮೈದಾನದಲ್ಲಿ ನಡೆದ ಐಪಿಎಲ್ ಕ್ರಿಕೆಟ್ ಪಂದ್ಯದಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡಕ್ಕೆ ಕ್ರಿಸ್ ಗೇಲ್ ಸೂಪರ್ ಕಂ ಬ್ಯಾಕ್ ಮಾಡಿದ್ದು, ಆರ್ ಸಿಬಿ ವಿರುದ್ಧ ಅಂತಿಮ ಎಸೆತದ ತನಕವೂ ಪಂದ್ಯ ಮುಂದೂಡಿ ಅಂತಿಮ ಎಸೆತದಲ್ಲಿ ರೋಚಕ ಗೆಲುವು ದಾಖಲಿಸಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಆರ್ ಸಿಬಿ ತಂಡ ಇಪ್ಪತ್ತು ಓವರ್ ಗಳಲ್ಲಿ ಆರು ವಿಕೆಟ್ ಗಳ ನಷ್ಟಕ್ಕೆ 171 ರನ್ ಗಳನ್ನು ಸಿಡಿಸಿತು. ಗುರಿ ಬೆನ್ನತ್ತಿದ ಪಂಜಾಬ್ 8 ವಿಕೆಟ್ ಗಳ ಗೆಲುವು ದಾಖಲಿಸಿದೆ. ಆರ್ ಸಿಬಿ ಪರ ಆರನ್ ಪಿಂಚ್ 20, ಪಡಿಕ್ಕಲ್ 18, ನಾಯಕ ವಿರಾಟ್ ಕೊಹ್ಲಿ 48, ಸುಂದರ್ 13, ಶಿವಂ ದುಬೆ 23 ರನ್ ಗಳನ್ನು ಸಿಡಿಸಿದರೆ, ಮೊರ್ರಿಸ್ ಎಂಟು ಎಸೆತಗಳಲ್ಲಿ 25 ರನ್ ಸಿಡಿಸಿ ತಂಡದ ಮೊತ್ತ ಹೆಚ್ಚಳಕ್ಕೆ ನೆರವಾದರು. ಇನ್ನು ಪಂಜಾಬ್ ಪರ ಮಹಮ್ಮದ್ ಶಮಿ ಹಾಗೂ ಮುರುಗನ್ ಅಶ್ವಿನ್ ತಲಾ ಎರಡು ವಿಕೆಟ್ ಗಳನ್ನು ಪಡೆದರು.
ಆರ್ ಸಿಬಿ ನೀಡಿದ ಗುರಿ ಬೆನ್ನತ್ತಿದ ಪಂಜಾಬ್ ತಂಡಕ್ಕೆ ಉತ್ತಮ ಆರಂಭ ಸಿಕ್ಕಿತು. ಆರಂಭಿಕರಾದ ತಂಡದ ನಾಯಕ ಕೆ.ಎಲ್. ರಾಹುಲ್ ಭರ್ಜರಿ 5 ಸಿಕ್ಸರ್ ಗಳ ನೆರವಿನಿಂದ 61 ರನ್ ಗಳನ್ನು ಸಿಡಿಸಿದರು. ಇನ್ನು ಮಾಯಾಂಕ್ ಅಗರ್ವಾಲ್ 45 ರನ್ ಸಿಡಿಸಿದರು. ಅವರ ಬ್ಯಾಟ್ ನಿಂದ ಮೂರು ಸಿಕ್ಸರ್ ಸಿಡಿದವು. ಇನ್ನು ಯುನಿವರ್ಸ್ ಬಾಸ್ ಕ್ರಿಸ್ ಗೇಲ್ 53 ರನ್ ಸಿಡಿಸಿದರು. ಇವರ ಬ್ಯಾಟ್ ನಿಂದ ಭರ್ಜರಿ ಐದು ಸಿಕ್ಸರ್ ಗಳು ಸಿಡಿದರು. ಅಂತಿಮವಾಗಿ ಇಪ್ಪತ್ತನೇ ಓವರ್ ನ ಕೊನೇ ಎಸೆತದಲ್ಲಿ ಒಂದು ರನ್ ಪಂಜಾಬ್ ಗೆಲುವಿಗೆ ಬೇಕಾಗಿತ್ತು. ಈ ವೇಳೆ ಬ್ಯಾಟಿಂಗ್ ಗೆ ಇಳಿದ ಪೂರನ್ ಸಿಕ್ಸರ್ ಸಿಡಿಸಿ ಗೆಲುವಿನ ದಡ ಸೇರಿಸಿದರು. ಆ ಮೂಲಕ ಪಂಜಾಬ್ ಎರಡನೇ ಗೆಲುವು ದಾಖಲಿಸಿದಂತಾಗಿದೆ. ಎರಡೂ ಗೆಲುವುಗಳು ಆರ್ ಸಿಬಿ ವಿರುದ್ಧ ಆಗಿರುವುದು ವಿಶೇಷವಾಗಿದೆ.