ಅಬುಧಾಬಿ, ಸೆ. 24 (DaijiworldNews/SM): ದುಬೈ ಅಂತರಾಷ್ಟ್ರೀಯ ಕ್ರಿಕೆಟ್ ಮೈದಾನದ ಪಂಜಾಬ್ ವಿರುದ್ಧದ ಪಂದ್ಯದಲ್ಲಿ ಬೆಂಗಳೂರು ತಂಡ 97 ರ ಗಳ ಹೀನಾಯ ಸೋಲನುಭವಿಸಿದೆ.
ಪಂಜಾಬ್ ನೀಡಿದ 207 ರನ್ ಗಳ ಗುರಿ ಬೆನ್ನಟ್ಟಿದ ಆರ್ ಸಿಬಿ ತಂಡ ಹದಿನೇಳು ಓವರ್ ಗಳಲ್ಲಿ 109 ರನ್ ಗಳಿಗೆ ಆಲೌಟ್ ಆಯಿತು.
ಟಾಸ್ ಸೋತು ಮೊದಲು ಬ್ಯಾಟಿಂಗ್ ಇಳಿದ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಪರ ನಾಯಕ ಕೆ.ಎಲ್. ರಾಹುಲ್ ಜವಾಬ್ದಾರಿಯುತ ಆಟ ಪ್ರದರ್ಶಿಸಿದರು. ಆರಂಭಿಕರಾಗಿ ಕಣಕ್ಕಿಳಿದಿದ್ದ, ಮಯಾಂಕ್ ಅಗರ್ವಲ್ 26 ರನ್ ಸಿಡಿಸಿದರೆ, ನಿಕೋಲಸ್ ಪೋರನ್ 17 ರನ್ ಸಿಡಿಸಿ ನಿರ್ಗಮಿಸಿದರು. ಬಳಿಕ ಮ್ಯಾಕ್ಸ್ ವೆಲ್ 5 ರನ್ ಗಳಿಗೆ ನಿರ್ಗಮಿಸಿದರು. ಆದರೆ, ನಾಯಕ ಕೆ.ಎಲ್. ರಾಹುಲ್ ಅಬ್ಬರಿಸಿ ಶತಕ ಸಿಡಿಸಿದರು. ಕನ್ನಡಿಗ ಬೆಂಗಳೂರು ಬೌಲರ್ ಗಳನ್ನು ಮನಬಂದಂತೆ ಚಚ್ಚಿದರು. ಅಂತಿಮವಾಗಿ 20 ಓವರ್ ಗಳಲ್ಲಿ ಮೂರು ವಿಕೆಟ್ ಗಳ ನಷ್ಟಕ್ಕೆ 206 ರನ್ ಗಳಿಸಿತು.
ಇನ್ನು ಪಂಜಾಬ್ ನೀಡಿದ ಗುರಿ ಬೆನ್ನಟ್ಟಿದ ಬೆಂಗಳೂರು ತಂಡ ರನ್ ಪೇರಿಸಲು ಪರದಾಡಿತು. ಕಳೆದ ಪಂದ್ಯದಲ್ಲಿ ಅಬ್ಬರಿಸಿದ್ದ ದೇವದತ್ತ ಪಡಿಕ್ಕಲ್ ಒಂದು ರನ್ ಗಳಿಸಿ ನಿರ್ಗಮಿಸಿದರೆ, ಅರೊನ್ ಪಿಂಚ್ 20 ರನ್ ಗಳಿಸಿದರು. ಜೊಶ್ ಪಿಲಿಪ್ಪೆ ರನ್ ಗಳಿಸಲಾಗದೆ ಫೆವೀಲಿಯನ್ ನತ್ತ ನಡೆದರು. ನಾಯಕ ವಿರಾಟ್ ಕೊಹ್ಲಿ ಒಂದು ರನ್ ಮಾತ್ರವೇ ಗಳಿಸಿ ನಿರ್ಗಮಿಸಿದರು. ಎಬಿಡಿ 28 ರನ್ ಸಿಡಿಸಿ ತಂಡಕ್ಕೆ ಅಲ್ಪ ನೆರವಾದರು.