ಅಬುಧಾಬಿ, ಸೆ 19 (DaijiworldNews/PY): ಕೊರೊನಾ ಸೋಂಕಿನ ಏಳು-ಬೀಳುಗಳ ನಡುವೆಯೂ ಕೂಡಾ ಹದಿಮೂರನೇ ಆವೃತ್ತಿಯ ಐಪಿಎಲ್ ಇಂದಿನಿಂದ ಯುಎಇಯಲ್ಲಿ ಆರಂಭವಾಗಲಿದ್ದು, ಮೊದಲ ಪಂದ್ಯಾಟದಲ್ಲಿ ರೋಹಿತ್ ಶರ್ಮಾ ಅವರ ಮುಂಬೈ ಇಂಡಿಯನ್ಸ್ ಹಾಗೂ ಮಹೇಂದ್ರ ಸಿಂಗ್ ಧೋನಿ ಅವರ ಚೆನ್ನೈ ಸೂಪರ್ ಕಿಂಗ್ಸ್ ಮುಖಾಮುಖಿಯಾಗಲಿದೆ.
ಕೊರೊನಾ ವೈರಸ್ ವ್ಯಾಪಿಸಿದ್ದ ಕಾರಣ ಐಪಿಎಲ್ ಪಂದ್ಯಾಟವನ್ನು ಮುಂದೂಡಿದ್ದು, ಇದೀಗ ಯುಎಇಯಲ್ಲಿ 13ನೇ ಆವೃತ್ತಿಯ ಐಪಿಎಲ್ ಆರಂಭವಾಗಿದ್ದು, ಉದ್ಘಾಟನಾ ಕಾರ್ಯಕ್ರಮ ಅಬು ಧಾಬಿಯ ಶೇಖ್ ಝಹೇದ್ ಕ್ರೀಡಾಂಗಣದಲ್ಲಿ ನಡೆಯಲಿದೆ.
ಮುಂಬೈ ಇಂಡಿಯನ್ಸ್ ತಂಡವು ನಾಲ್ಕು ಐಪಿಎಲ್ ಟ್ರೋಫಿಯನ್ನು ಮುಡಿಗೇರಿಸಿಕೊಂಡಿದ್ದು, ಚೆನನೈ ಸೂಪರ್ ಕಿಂಗ್ಸ್ ತಂಡ ಮೂರು ಟ್ರೋಫಿಯನ್ನು ತನ್ನದಾಗಿಸಿಕೊಂಡಿದೆ. ಈ ಮೂಲಕ ಎರಡನೇ ಅತ್ಯಂತ ಯಶಸ್ವಿ ತಂಡವಾಗಿ ಹೆಸರು ಪಡೆದಿದೆ.
ಈವರೆಗೆ ಮುಂಬೈ ಇಂಡಿಯನ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಒಟ್ಟು 28 ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ. ಈ ಪೈಕಿ 11 ಪಂದ್ಯಗಳಲ್ಲಿ ಸಿಎಸ್ಕೆ ಜಯ ಗಳಿಸಿದರೆ, ಉಳಿದಂತೆ 17 ಪಂದ್ಯಗಳಲ್ಲಿ ಮುಂಬೈ ಇಂಡಿಯನ್ಸ್ ತಂಡ ಜಯ ಗಳಿಸಿದೆ.
ಕೊರೊನಾ ಹಿನ್ನೆಲೆ ಪಂದ್ಯಾಟ ವೀಕ್ಷಣೆಗೆ ವೀಕ್ಷಕರಿಗೆ ಅವಕಾಶ ಕಲ್ಪಿಸಿಲ್ಲ. ಈ ಕಾರಣದಿಂದ ಮುಚ್ಚಿದ ಕ್ರೀಡಾಂಗಣದಲ್ಲಿ ಎಲ್ಲಾ ಪಂದ್ಯಾಟಗಳು ನಡೆಯಲಿವೆ. ದುಬೈಯಲ್ಲಿ ಬಿಸಿಲು ಜಾಸ್ತಿ ಇರುವ ಕಾರಣ ಆಟಗಾರರು ತಮ್ಮ ಚರ್ಮದ ಸುರಕ್ಷತೆ ಕಾಪಾಡಿಕೊಳ್ಳುತ್ತಿದ್ದಾರೆ.
ನಾಯಕ ಹಾಗೂ ವಿಕೆಟ್ ಕೀಪರ್ ಎಂ.ಎಸ್.ಧೋನಿ, ಶೇನ್ ವ್ಯಾಟ್ಸನ್, ಮುರಳಿ ವಿಜಯ್, ಅಂಬಾಟಿ ರಾಯುಡು, ಕೇದಾರ್ ಜಾಧವ್, ಡ್ವೇನ್ ಬ್ರಾವೊ, ರವೀಂದ್ರ ಜಡೇಜಾ, ಮಿಚೆಲ್ ಸ್ಯಾಂಟ್ನರ್, ದೀಪಕ್ ಚಹರ್. ಶಾರ್ದೂಲ್ ಠಾಕೂರ್, ಇಮ್ರಾನ್ ತಾಹೀರ್ ಚೆನನೈ ಸೂಪರ್ ಕಿಂಗ್ಸ್ ತಂಡದಲ್ಲಿದ್ದಾರೆ.
ಇನ್ನು ಮುಂಬೈ ಇಂಡಿಯನ್ಸ್ ತಂಡದಲ್ಲಿ ನಾಯಕ ರೋಹಿತ್ ಶರ್ಮಾ, ಸೂರ್ಯಕುಮಾರ್ ಯಾದವ್, ವಿಕೆಟ್ ಕೀಪರ್ ಕ್ವಿಂಟನ್ ಡಿ ಕಾಕ್, ಇಶಾನ್ ಕಿಶಾನ್, ಕೀರನ್ ಪೊಲಾರ್ಡ್, ಹಾರ್ದಿಕ್ ಪಾಂಡ್ಯ, ಕೃನಾಲ್ ಪಾಂಡ್ಯ, ನಥಾನ್ ಕೌಲ್ಟರ್ನೈಲ್, ರಾಹುಲ್ ಚಹರ್, ಜಸ್ಪ್ರಿತ್ ಬುಮ್ರಾ, ಟ್ರೆಂಟ್ ಬೌಲ್ಟ್ ಇದ್ದಾರೆ.