ನವದೆಹಲಿ, ಆ. 31 (DaijiworldNews/SM): ಹದಿಮೂರನೇ ಆವೃತ್ತಿಯ ಐಪಿಎಲ್ ಟೂರ್ನಿ ಆಯೋಜನೆಗೆ ಬಹುತೇಕ ಸಿದ್ಧತೆಗಳು ನಡೆಯುತ್ತಿವೆ. ಸೆಪ್ಟೆಂಬರ್ 19ರಿಂದ ನವೆಂಬರ್ 10ರವರೆಗೆ ದುಬೈ, ಶರ್ಜಾ ಮತ್ತು ಅಬುದಾಭಿ ಕ್ರೀಡಾಂಗಣಗಳಲ್ಲಿ ಟೂರ್ನಿ ನಡೆಯಲಿದೆ. ಇನ್ನು ಈ ನಡುವೆ ಉದ್ಘಾಟನಾ ಪಂದ್ಯದಿಂದ ಚೆನ್ನೈ ಸೂಪರ್ ಕಿಂಗ್ಸ್ ದೂರಸರಿಯುವ ಸಾಧ್ಯತೆ ಇದೆ.
ಐಪಿಎಲ್ ಹಿನ್ನೆಲೆಯಲ್ಲಿ ಈಗಾಗಗಲೇ ಎಲ್ಲಾ 8 ತಂಡಗಳು ದುಬೈನಲ್ಲಿ ಬೀಡು ಬಿಟ್ಟಿವೆ. ಈಗಾಗಲೇ ತಂಡದ ಆಟಗಾರರು ಅಭ್ಯಾಸದಲ್ಲಿ ನಿರತರಾಗಿದ್ದಾರೆ. ಆದರೆ, ಚೆನ್ನೈ ಸೂಪರ್ ಕಿಂಗ್ಸ್ ತಂಡದ ಆಟಗಾರರಲ್ಲಿ ಕೊರೋನಾ ಕಾಣಿಸಿಕೊಂಡಿದ್ದು, ಕಳವಳಕಾರಿ ವಿಚಾರವಾಗಿದೆ. ಸೋಂಕು ಪತ್ತೆಯಾದ ಹಿನ್ನೆಲೆ ಸಹ ಆಟಗಾರರು ಕ್ವಾರಂಟೈನ್ ನಲ್ಲಿದ್ದಾರೆ. ಆದರೆ, ಇದೀಗ ಸಿಎಸ್ಕೆ ಆಟಗಾರರು ಅಭ್ಯಾಸ ಬಿಟ್ಟು ಮತ್ತೆ 6 ದಿನಗಳ ಕ್ವಾರಂಟೈನ್ಗೆ ಒಳಪಡಬೇಕಿದೆ.
ಹೀಗಾಗಿ ಸೆಪ್ಟೆಂಬರ್ 19ರಂದು ನಡೆಯಲಿರುವ ಮುಂಬೈ ಇಂಡಿಯನ್ಸ್ ವಿರುದ್ದದ ಐಪಿಎಲ್ 2020 ಟೂರ್ನಿಯ ಉದ್ಘಾಟನಾ ಪಂದ್ಯಕ್ಕೆ ಸಿಎಸ್ಕೆ ಅಲಭ್ಯವಾಗುವ ಸಾಧ್ಯತೆ ಹೆಚ್ಚಾಗಿತ್ತದೆ. ಈ ಹಿಂದ ಭಾರತದಲ್ಲಿ ನಡೆಯಬೇಕಿದ್ದ ಸರಣಿಯಲ್ಲೂ ಮುಂಬೈ-ಚೆನ್ನೈ ತಂಡಗಳು ಮುಖಾಮುಖಿಯಾಗಬೇಕಿತ್ತು. ಇದೀಗ ಯುಎ ಇಯಲ್ಲಿ ನಡೆಯುವ ಟೂರ್ನಿಯಲ್ಲೂ ಇದೇ ತಂಡಗಳು ಉದ್ಘಾಟನಾ ಪಂದ್ಯದಲ್ಲಿ ಮುಖಾಮುಖಿಯಾಗಿವೆ. ಆದರೆ, ಇದೀಗ ಕೊರೊನಾ ಕಾರಣದಿಂದ ಚೆನ್ನೈ ಆಡುವುದು ಅನುಮಾನ ಎನ್ನಲಾಗಿದೆ. ಈ ಬಗ್ಗೆ ಇಲ್ಲಿಯ ತನಕ ಯಾವುದೇ ಬದಲಾವಣೆಯಾಗಲಿ, ನಿರ್ಧಾರವಾಗಲಿ ಪ್ರಕಟಗೊಂಡಿಲ್ಲ.