ನವದೆಹಲಿ, ಆ. 23 (DaijiworldNews/SB) : ಮಹೇಂದ್ರ ಸಿಂಗ್ ಧೋನಿ ಅವರಿಂದ ಅಂತರಾಷ್ಟ್ರೀಯ ಕ್ರಿಕೆಟಿಗೆ ಅನೀರೀಕ್ಷಿತ ವಿದಾಯ ಘೋಷಣೆ ಬಳಿಕ ಅವರಿಗೋಸ್ಕರ ಅರ್ಹ ವಿದಾಯ ಪಂದ್ಯವೊಂದನ್ನು ನಡೆಸುವ ಬಗ್ಗೆ ಬಿಸಿಸಿಐ ಹಾಗೂ ಕ್ರಿಕೆಟ್ ಜಗತ್ತು ವಿಶೇಷ ಚಿಂತನೆಯನ್ನು ನಡೆಸುತ್ತಿದೆ. ಇದೀಗ ಧೋನಿ ವಿದಾಯ ಪಂದ್ಯದ ಕುರಿತು ಚರ್ಚೆಗಳಿಗೆ ಗರಿಗೆದರುತ್ತಿದ್ದಂತೆ ಭಾರತೀಯ ಕ್ರಿಕೆಟ್ ತಂಡದ ಮಾಜಿ ವೇಗಿ ಹಾಗೂ ಪ್ರತಿಭಾವಂತ ಸ್ವಿಂಗರ್ ಇರ್ಫಾನ್ ಪಠಾಣ್ ಅರ್ಹ ವಿದಾಯ ದೊರಕದ ಇನ್ನೂ ಕೆಲವು ಆಟಗಾರ ಪಟ್ಟಿಯೊಂದಿಗೆ ವಿದಾಯ ಪಂದ್ಯ ಎಲ್ಲರಿಗೂ ಬೇಕಾಗಿದೆ ಎಂಬ ಬೇಡಿಕೆಯನ್ನು ಮುಂದಿಟ್ಟಿದ್ದಾರೆ.
ವೀರೆಂದ್ರ ಸೆಹ್ವಾಗ್, ಗೌತಮ್ ಗಂಭೀರ್, ರಾಹುಲ್ ದ್ರಾವಿಡ್, ಲಕ್ಶ್ಮಣ್ ಸೇರಿದಂತೆ ಅನೇಕ ಪ್ರತಿಭಾನ್ವಿತರಿಗೆ ಅರ್ಹ ವಿದಾಯ ದೊರಕದಿರಲು ಪ್ರಧಾನ ಕಾರಣ ಮಹೇಂದ್ರ ಸಿಂಗ್ ಧೋನಿ ಎಂದು ವಾದಿಸುವವರೂ ಇದ್ದಾರೆ. ಇದೀಗ ಧೋನಿಗೆ ವಿದಾಯ ಪಂದ್ಯ ಏರ್ಪಡಿಸುವುದ್ದರೆ ವಿದಾಯ ಪಂದ್ಯ ವಂಚಿತ ಇತರ ತಾರೆಗಳನ್ನು ಪಂದ್ಯಕ್ಕೆ ಸೇರಿಸಿಕೊಳ್ಳಬೇಕೆಂಬ ಅಭಿಪ್ರಾಯವನ್ನು ಪಠಾಣ್ ವ್ಯಕ್ತಪಡಿಸಿದ್ದಾರೆ ಹಾಗೂ ಟ್ವೀಟ್ ಮೂಲಕ ಕೆಲ ಕ್ರಿಕೆಟಿಗರ ಹೆಸರನ್ನು ಸೂಚಿಸಿದ್ದಾರೆ. ಪಠಾಣ್ ಟ್ವೀಟ್ ಇದೀಗ ಕ್ರೀಡಾ ವಲಯದಲ್ಲಿ ವಿಶೇಷ ಟ್ರೆಂಡ್ ಆಗುತ್ತಿದೆ.