ಬೆಂಗಳೂರು, ಆ. 22(DaijiworldNews/HR): ಐಪಿಎಲ್-2020ಗಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ತಂಡ ಈಗಾಗಲೇ ಯುಎಇಗೆ ತಮ್ಮ ಪ್ರಯಾಣವನ್ನು ಬೆಳೆಸಿದ್ದು, ಐಪಿಎಲ್ಗಾಗಿ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ.
ಆರ್ಸಿಬಿ ಐಪಿಎಲ್ನಲ್ಲಿ ಬಹಳ ಜನಪ್ರಿಯವಾದ ತಂಡವಾಗಿದ್ದರೂ ಕೂಡ ಒಂದು ಬಾರಿಯೂ ಕಪ್ ಗೆದ್ದಿಲ್ಲ. ಭಾರತ ತಂಡವನ್ನು ಮುನ್ನಡೆಸುತ್ತಿರುವ ನಾಯಕ ವಿರಾಟ್ ಕೊಹ್ಲಿಯವರೇ ನಾಯಕನಾದರೂ ತಂಡ ಒಂದು ಬಾರಿಯೂ ಕಪ್ ಗೆಲ್ಲದ ಕಾರಣ ಕೊಹ್ಲಿಯನ್ನು ನಾಯಕತ್ವದಿಂದ ಕೆಳಗಿಳಿಸಿ ಎಂಬುದು ಕೆಲವರ ವಾದವಾಗಿದೆ.
ಇದೀಗ ಈ ಬಗ್ಗೆ ಆರ್ಸಿಬಿ ತಂಡದ ಚೇರ್ಮ್ಯಾನ್ ಸಂಜೀವ್ ಚುರಿವಾಲಾ ಮಾತನಾಡಿ, ವಿರಾಟ್ ಭಾರತ ತಂಡದ ನಾಯಕ ಮತ್ತು ಹೆಚ್ಚಿನ ಅಭಿಮಾನಿಗಳನ್ನು ಹೊಂದಿರುವ ಆಟಗಾರ. ಆಟದಲ್ಲಿ ಸೋಲು ಗೆಲುವು ಸಾಮಾನ್ಯ ಆದರೆ ವಿರಾಟ್ ಅವರು ಯಾವ ರೀತಿಯ ಟ್ರ್ಯಾಕ್ ರೆಕಾರ್ಡ್ ಹೊಂದಿದ್ದಾರೆ ಎಂಬುದನ್ನು ನಾವು ಮರೆಯಬಾರದು ಮತ್ತು ಆರ್ಸಿಬಿ ತಂಡದ ಮಾಲೀಕನಾಗಿ ನಮಗೆ ಕೊಹ್ಲಿ ತಂಡದ ನಾಯಕನಾಗಿರುವುದು ಹೆಮ್ಮೆ ಇದೆ ಎಂದು ಹೇಳಿದ್ದಾರೆ.
ಇನ್ನು ಈ ಬಾರಿಯ ಆರ್ಸಿಬಿ ತಂಡ ಬಹಳ ಬ್ಯಾಲೆನ್ಸ್ ಆಗಿದ್ದು, ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡು ವಿಭಾಗದಲ್ಲೂ ತಂಡ ಬಹಳ ಬಲಿಷ್ಠವಾಗಿದೆ. ಹಿಂದಿನ ಆಟಗಳಲ್ಲಿ ನಮ್ಮ ತಂಡಕ್ಕೆ ಇದ್ದ ವೈಫಲ್ಯಗಳನ್ನು ಗಮನದಲ್ಲಿ ಇಟ್ಟುಕೊಂಡು, ಈ ಬಾರಿಯ ಹಾರಜಿನಲ್ಲಿ ಉತ್ತಮ ಆಟಗಾರರನ್ನು ಖರೀದಿ ಮಾಡಿದ್ದೇವೆ. ಹೀಗಾಗಿ ಈ ಬಾರಿ ಕಪ್ ಗೆಲ್ಲುವ ವಿಶ್ವಾದಲ್ಲಿ ಇದ್ದೇವೆ ಎಂದು ಸಂಜೀವ್ ಚುರಿವಾಲಾ ತಿಳಿಸಿದ್ದಾರೆ.
ಐಪಿಎಲ್ನಲ್ಲಿ ಬ್ಯಾಟ್ಸ್ಮ್ಯಾನ್ ಆಗಿ ಉತ್ತಮ ಸಾಧನೆ ಮಾಡಿರುವ ಕೊಯ್ಲಿ, ಐಪಿಎಲ್ನಲ್ಲಿ 37.84ರ ಸರಾಸರಿಯೊಂದಿಗೆ ಒಟ್ಟು 5,412 ರನ್ ಗಳಿಸಿದ್ದಾರೆ ಮತ್ತು 131.61 ಸ್ಟ್ರೈಕ್ ರೇಟ್ ಬ್ಯಾಟ್ ಬೀಸಿದ್ದಾದ್ದು, ಪ್ರಪಂಚದ ಶ್ರೀಮಂತ ಕ್ರಿಕೆಟ್ ಟೂರ್ನಿಯಲ್ಲಿ ಕೊಹ್ಲಿ 5 ಶತಕ ಮತ್ತು 36 ಅರ್ಧಶತಕ ಗಳಿಸಿದ್ದಾರೆ. ಇದರ ಜೊತೆಗೆ ಐಪಿಎಲ್ನಲ್ಲಿ ಅತೀ ಹೆಚ್ಚು ರನ್ ಗಳಿಸಿದ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ. ಆದರೆ ಇದುವರೆಗೆ ನಾಯಕನಾಗಿ ಐಪಿಎಲ್ ಟ್ರೋಫಿಯನ್ನು ಮಾತ್ರ ಗೆದ್ದಿಲ್ಲ.