ನವದೆಹಲಿ, ಆ 20 (DaijiworldNews/PY): ಆ.15ರಂದು ಎಂ.ಎಸ್.ಧೋನಿ ಅವರು ಅಂತರಾಷ್ಟ್ರೀಯ ಕ್ರಿಕೆಟ್ಗೆ ವಿದಾಯ ಹೇಳಿದ್ದು, ನಿವೃತ್ತಿ ಹೊಂದಿದ ಧೋನಿ ಅವರಿಗೆ ಗಣ್ಯರು ಸೇರಿದಂತೆ ಅಭಿಮಾನಿ ಶುಭಕೋರಿದ್ದಾರೆ. ಈ ನಡುವೆ ಗುರುವಾರ ಪ್ರಧಾನಿ ನರೇಂದ್ರ ಮೋದಿ ಅವರು ಕೂಡಾ ಶುಭ ಕೋರಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ಮಹೇಂದ್ರ ಸಿಂಗ್ ಧೋನಿ ಅವರು ನಿವೃತ್ತರಾದ ಹಿನ್ನೆಲೆ ಎರಡು ಪುಟಗಳ ಪತ್ರ ಬರೆದಿದ್ದಾರೆ.
ಈ ಪತ್ರವನ್ನು ತಮ್ಮ ಟ್ವಿಟ್ಟರ್ನಲ್ಲಿ ಹಂಚಿಕೊಂಡಿರುವ ಧೋನಿ, ಯೋಧನಾಗಲಿ, ಕಲಾವಿದನಾಗಲಿ ಅಥವಾ ಕ್ರೀಡಾಪಟುವಾಗಲಿ ಹಂಬಲಿಸುತ್ತಿರುವುದು ಮೆಚ್ಚುಗೆಗಾಗಿ. ಅಲ್ಲದೇ, ಪ್ರತಿಯೊಬ್ಬರೂ ಅವರ ಕಠಿಣ ಪರಿಶ್ರಮ ಹಾಗೂ ತ್ಯಾಗದತ್ತ ಗಮನಹರಿಸುತ್ತಾರೆ , ಶ್ಲಾಘಿಸುತ್ತಾರೆ. ನಿಮ್ಮ ಮೆಚ್ಚುಗೆಗೆ ಹಾಗೂ ಶುಭ ಹಾರೈಕೆಗಾಗಿ ನನ್ನ ಕೃತಜ್ಞತೆಗಳು ಎಂದು ತಿಳಿಸಿದ್ದಾರೆ.
ತಮ್ಮ ಪತ್ರದಲ್ಲಿ ಪ್ರಧಾನಿ ಮೋದಿ ಅವರು ಧೋನಿ ಅವರನ್ನು ಶ್ಲಾಘಿಸಿದ್ದಾರೆ. ಸೋಲು ಹಾಗೂ ಗೆಲುವಿನ ಸಂದರ್ಭಗಳಲ್ಲಿ ನಿಮ್ಮ ತಾಳ್ಮೆ ಅದ್ಭುತ ಎಂದು ಹೇಳಿದ್ದಾರೆ.
ನಿಮಗೆ ಭಾರತೀಯ ಸೇನೆಯ ಬಗ್ಗೆ ಇರುವ ಗೌರವ ನೋಡಿ ನನಗೆ ಸಂತಸ ತಂದಿದೆ. ನಿಮ್ಮ ಕುಟುಂಬಕ್ಕೆ ನನ್ನ ಶುಭ ಹಾರೈಕೆಗಳು. ನೀವು ಮಾಡಿರುದವ ಸಾಧನೆಯಲ್ಲಿ ಅವರ ತ್ಯಾಗವೂ ಸೇರಿದೆ. ನಿಮ್ಮ ಭವಿಷ್ಯ ಅದ್ಭುತವಾಗಿರಲಿ ಎಂದು ಶುಭ ಹಾರೈಸಿದ್ದಾರೆ