ನವದೆಹಲಿ, ಆ 18 (Daijiworld News/MSP): ದೇಶದ ಅತ್ಯುನ್ನತ ಕ್ರೀಡಾ ಗೌರವ ಖೇಲ್ ರತ್ನ ಪ್ರಶಸ್ತಿಗೆ , ಭಾರತದ ಬ್ಯಾಟಿಂಗ್ ಸೂಪರ್ಸ್ಟಾರ್ ರೋಹಿತ್ ಶರ್ಮಾ ಅವರನ್ನು ಶಿಫಾರಸು ಮಾಡಲಾಗಿದೆ. ಅವರೊಂದಿಗೆ ಕುಸ್ತಿಪಟು ವಿನೇಶ್ ಫೋಗಾಟ್, ಟೇಬಲ್ ಟೆನಿಸ್ ಆಟಗಾರ್ತಿ ಮಾನಿಕಾ ಬಾತ್ರಾ ಮತ್ತು 2016 ರ ಪ್ಯಾರಾಲಿಂಪಿಕ್ ಚಿನ್ನದ ಪದಕ ವಿಜೇತ ಮರಿಯಪ್ಪನ್ ತಂಗವೇಲು ಅವರನ್ನು ಪ್ರತಿಷ್ಠಿತ ಪ್ರಶಸ್ತಿಗೆ ಶಿಫಾರಸು ಮಾಡಲಾಗಿದೆ.
ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿ , ಅರ್ಜುನ ಪ್ರಶಸ್ತಿ ಮತ್ತು ಇತರ ರಾಷ್ಟ್ರೀಯ ಕ್ರೀಡಾ ಪ್ರಶಸ್ತಿಗಳನ್ನು ನಿರ್ಧರಿಸುವ ಆಯ್ಕೆ ಸಮಿತಿ ಮಂಗಳವಾರ ಸಭೆ ಸೇರಿದ ನಂತರ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಆಯ್ಕೆ ಸಮಿತಿ ಮಾಡಿದ ಶಿಫಾರಸುಗಳನ್ನು ಕ್ರೀಡಾ ಸಚಿವರ ಅನುಮೋದನೆಗಾಗಿ ಕಳುಹಿಸಲಾಗುತ್ತದೆ. ಸಚಿವರು ಅಂಗೀಕರಿಸಿದ ಬಳಿಕ ,ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.
ಒಂದು ವೇಳೆ ರೋಹಿತ್ ಶರ್ಮಾ ಅವರಿಗೆ ಪ್ರಶಸ್ತಿ ಬಂದರೆ, ಪ್ರಶಸಿ ಪಡೆದ ನಾಲ್ಕನೇ ಕ್ರಿಕೆಟಿಗರಾಗುವ ಇವರಾಗುತ್ತಾರೆ. ಇದಕ್ಕೂ ಮೊದಲು ಸಚಿನ್ ತೆಂಡೂಲ್ಕರ್, ಎಂ.ಎಸ್.ಧೋನಿ ಮತ್ತು ವಿರಾಟ್ ಕೊಹ್ಲಿ , ಖೇಲ್ ರತ್ನವನ್ನು ಸ್ವೀಕರಿಸಿದ್ದರು.