ಚೆನ್ನೈ, ಆ. 15, (DaijiworldNews/SM): ಯುಎಇನಲ್ಲಿ ಈಗಾಗಲೇ ಐಪಿಎಲ್ ನಡೆಸುವುದು ಫೈನಲ್ ಆಗಿದೆ. ಸೆಪ್ಟೆಂಬರ್ 19ರಿಂದ ಟೂರ್ನಿ ಆರಂಭಗೊಳ್ಳಲಿದೆ. ಈ ಕಾರಣದಿಂದ ಆಟಗಾರರು ಅಭ್ಯಾಸದಲ್ಲಿ ತೊಡಗಿಕೊಂಡಿದ್ದಾರೆ. ಭಾರತದ ಮಾಜಿ ನಾಯಕ ಎಂ.ಎಸ್. ಧೋನಿ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಕೆಲ ಆಟಗಾರರು ಅಲ್ಪಾವಧಿಯ ತರಬೇತಿ ಶಿಬಿರದಲ್ಲಿ ಭಾಗವಹಿಸಿದ್ದಾರೆ.
ಮಾಹಿ ಕಳೆದ ಒಂದು ವರ್ಷದಿಂದ ಕ್ರಿಕೆಟ್ ನಲ್ಲಿ ಕಾಣಿಸಿಕೊಂಡಿಲ್ಲ. ಉಳಿದ ಆಟಗಾರರಿಗೂ ಕೂಡ ಕಳೆದ ನಾಲ್ಕೈದು ತಿಂಗಳಿಂದ ಆಡೋದಕ್ಕೆ ಅವಕಾಶ ಸಿಕ್ಕಿಲ್ಲ. ಈ ಕಾರಣದಿಂದ ಧೋನಿ ಹಾಗೂ ಬಳಗ ತರಬೇತಿ ಶಿಬಿರಕ್ಕೆ ತೆರಳಿದೆ. ಶನಿವಾರದಿಂದ ಒಂದುವಾರಗಳ ಕಾಲ ತರಬೇತಿ ಶಿಬಿರ ನಡೆಯಲಿದೆ. ಧೋನಿ, ಸುರೇಶ್ ರೈನಾ, ದೀಪಕ್ ಚಹರ್, ಪಿಯೂಷ್ ಚಾವ್ಲಾ ಮತ್ತು ಕೇದರ್ ಜಾದವ್ ತರಬೇತಿಯಲ್ಲಿ ಭಾಗವಹಿಸಲಿದ್ದಾರೆ.
ಸುದೀರ್ಘ ವಿಶ್ರಾಂತಿ ಬಳಿಕ ಮೈದಾನಕ್ಕೆ ಇಳಿಯುವ ಸಂದರ್ಭದಲ್ಲಿ ಧೋನಿಯವರಿಗೆ ಒಂದಿಷ್ಟು ಅಭ್ಯಾಸದ ಅಗತ್ಯತೆ ಇದೆ. ಈ ಕಾರಣದಿಂದ ತರಬೇತಿ ಶಿಬಿರದಲ್ಲಿ ಭಾಗವಹಿಸುವ ನಿರ್ಧಾರ ಮಾಹಿ ಕೈಗೊಂಡಿದ್ದರು ಎಂದು ತಿಳಿದುಬಂದಿದೆ. ಮಹೇಂದ್ರ ಸಿಂಗ್ ಧೋನಿ ಸೇರಿದಂತೆ 13 ಅಥವಾ 14 ಮಂದಿ ಆಟಗಾರರು ಈ ಶಿಬಿರದಲ್ಲಿ ಪಾಲ್ಗೊಳ್ಳಲಿದ್ದಾರೆ.ನಾಳೆಯಿಂದ ತರಬೇತಿ ಆರಂಭವಾಗಲಿದೆ ಎಂದು ಸಿಎಸ್ ಕೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.