ನವದೆಹಲಿ, ಆ 10(DaijiworldNews/HR): 2020ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಪಂದ್ಯಾವಳಿಯಲ್ಲಿ ಬಾಬಾ ರಾಮದೇವ್ ಅವರ ಪತಂಜಲಿ ಆಯುರ್ವೇದ ಸಂಸ್ಥೆ ಪ್ರಾಯೋಜಕತ್ವ ವಹಿಸಲು ಆಸಕ್ತಿ ತೋರಿಸಿದೆ.
ಐಪಿಎಲ್ ಪ್ರಾಯೋಜಕತ್ವದಿಂದ ಚೀನೀ ಮೊಬೈಲ್ ಫೋನ್ ಕಂಪೆನಿ ವಿವೋ ಹಿಂದೆ ಸರಿದಾಗ ಸರಿದಾಗ ಅನೇಕರು, ಬಾಬಾ ರಾಮ್ದೇವ್ ಅವರ ಪತಂಜಲಿ ಸಂಸ್ಥೆ ಪ್ರಾಯೋಜಕತ್ವ ವಹಿಸಲಿ ಎಂದು ತಮಾಷೆ ಮಾಡಿದ್ದರು. ಇದೀಗ ಇದು ನಿಜವಾಗುವ ಸಾಧ್ಯತೆ ಕಾಣಿಸಿದೆ. ಐಪಿಎಲ್ 13ನೇ ಆವೃತ್ತಿಯ ಪ್ರಾಯೋಜಕತ್ವಕ್ಕೆ ಬಿಡ್ ಸಲ್ಲಿಸಲು ಪತಂಜಲಿ ಆಯುರ್ವೇದ ಸಂಸ್ಥೆ ಆಸಕ್ತಿ ತೋರಿದೆ.
ನಮ್ಮ ಪತಂಜಲಿ ಬ್ರ್ಯಾಂಡ್ ಗೆ ಜಾಗತಿಕ ಮಾರ್ಕೆಟಿಂಗ್ ವೇದಿಕೆ ಒದಗಿಸುವ ಉದ್ದೇಶ ನಮಗಿರುವುದರಿಂದ ಈ ಬಾರಿ ಐಪಿಎಲ್ ಪ್ರಾಯೋಜಕತ್ವ ವಹಿಸುವ ಕುರಿತಂತೆ ಪರಿಶೀಲಿಸುತ್ತಿದ್ದೇವೆ ಎಂದು ಪತಂಜಲಿ ಸಂಸ್ಥೆಯ ವಕ್ತಾರ ಎಸ್ ಕೆ ತಿಜರವಾಲ ಹೇಳಿದ್ದಾರೆ.
ಇನ್ನು ಐಪಿಎಲ್ ಪ್ರಾಯೋಜಕತ್ವಕ್ಕಾಗಿ ಖ್ಯಾತ ಕಂಪೆನಿಗಳಾದ ಅಮೆಝಾನ್, ಜಿಯೋ, ಅದಾನಿ ಕೂಡ ಆಸಕ್ತಿ ವಹಿಸಿವೆ ಎನ್ನಲಾಗಿದೆ.
ಬಿಡ್ ಸಲ್ಲಿಸುವ ಬಗ್ಗೆ ಪತಂಜಲಿ ಸಂಸ್ಥೆ ಇನ್ನೂ ಅಂತಿಮ ನಿರ್ಧಾರ ಕೈಗೊಂಡಿಲ್ಲ ಎಂದು ತಿಜರವಾಲಾ ಸ್ಪಷ್ಟಪಡಿಸಿದ್ದಾರೆ. ಐಪಿಎಲ್ ಶೀರ್ಷಿಕೆ ಪ್ರಾಯೋಜಕತ್ವಕ್ಕೆ ಆಗಸ್ಟ್ 14 ರೊಳಗೆ ಬಿಡ್ ಸಲ್ಲಿಸಬೇಕೆಂದು ಬಿಸಿಸಿಐ ಈಗಾಗಲೆ ತಿಳಿಸಿದೆ.