ನವದೆಹಲಿ, ಆ. 06(DaijiworldNews/HR): 2020ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಪಂದ್ಯಾವಳಿಯಲ್ಲಿ ವಿವೋ ಪ್ರಾಯೋಜಕತ್ವ ಇರುವುದಿಲ್ಲ ಬಿಸಿಸಿಐ ಮಾಧ್ಯಮ ಪ್ರಕಟಣೆ ತಿಳಿಸಿದೆ.
ಐಪಿಎಲ್ ಆಡಳಿತ ಮಂಡಳಿ ಸಭೆಯಲ್ಲಿ ಚೀನಾ ಮೂಲದ ವಿವೋ ಕಂಪನಿಯನ್ನು ಟೂರ್ನಿಯ ಪ್ರಾಯೋಜಕತ್ವ ಸ್ಥಾನದಲ್ಲಿ ಮುಂದುವರೆಸಿದ ನಂತರ , ಸಾಮಾಜಿಕ ಮಾಧ್ಯಮಗಳಲ್ಲಿ ಮಂಡಳಿಯ ನಿರ್ಣಯಕ್ಕೆ ದೊಡ್ಡ ಮಟ್ಟದಲ್ಲಿ ವಿರೋಧ ವ್ಯಕ್ತವಾಗಿತ್ತು.
ಈ ಬೆಳವಣಿಗೆಗಳ ಬೆನ್ನಲ್ಲೇ ಐಪಿಎಲ್ 2020 ಪಂದ್ಯಾವಳಿಗಾಗಿ ತಮ್ಮ ಪಾಲುದಾರಿಕೆಯನ್ನು ಸ್ಥಗಿತಗೊಳಿಸುವುದಾಗಿ ಬಿಸಿಸಿಐ ಮತ್ತು ಚೀನಾದ ಮೊಬೈಲ್ ಉತ್ಪಾದನಾ ದೈತ್ಯ ವಿವೊ ಮೊಬೈಲ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಪ್ರಕಟಿಸಿದೆ.
ಚೀನಾ ಮೂಲದ ವಿವೋ ಕಂಪನಿಯನ್ನು ಟೂರ್ನಿಯ ಪ್ರಾಯೋಜಕತ್ವ ಸ್ಥಾನದಲ್ಲಿ ಬಿಸಿಸಿಐ ಉಳಿಸಿಕೊಳ್ಳುವ ಕ್ರಮಕ್ಕೆ ತೀವ್ರ ಹಿನ್ನಡೆ ಬಂದು ಲೀಗ್ ಅನ್ನು ಬಹಿಷ್ಕರಿಸುವ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಚರ್ಚೆಗಳು ಪ್ರಾರಂಭವಾದ ಬಳಿಕ ಭಾರತದಲ್ಲಿ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಮತ್ತು ವಿವೊ ಮೊಬೈಲ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ 2020 ರಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ಗೆ ತಮ್ಮ ಪಾಲುದಾರಿಕೆಯನ್ನು ಸ್ಥಗಿತಗೊಳಿಸಲು ನಿರ್ಧರಿಸಿದೆ" ಎಂದು ಬಿಸಿಸಿಐ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದೆ.
ಇಂಡಿಯನ್ ಪ್ರೀಮಿಯರ್ ಲೀಗ್ ಈ ವರ್ಷ ಸೆಪ್ಟೆಂಬರ್ 19 ರಿಂದ ಪ್ರಾರಂಭವಾಗಲಿದ್ದು, ಫೈನಲ್ ನವೆಂಬರ್ 10 ರಂದು ನಡೆಯಲಿದೆ. ಈ ಪಂದ್ಯಾವಳಿ ಯುನೈಟೆಡ್ ಅರಬ್ ಎಮಿರೇಟ್ಸ್ನಲ್ಲಿ ಶಾರ್ಜಾ, ಅಬುಧಾಬಿ ಮತ್ತು ದುಬೈನಲ್ಲಿ ಮೂರು ಸ್ಥಳಗಳಲ್ಲಿ ನಡೆಯಲಿದೆ.