ನವದೆಹಲಿ, ಜು.16 (DaijiworldNews/SM): ಭಾರತ ತಂಡ ಪ್ರಸ್ತುತ ಉತ್ತಮ ಬೌಲಿಂಗ್ ವಿಭಾಗವನ್ನು ಹೊಂದಿದೆ. ಆದರೆ, ಈ ಹಿಂದೆ ಟೀಂ ಇಂಡಿಯಾದಲ್ಲಿ ಉತ್ತಮ ಬೌಲಿಂಗ್ ವಿಭಾಗ ಇರಲಿಲ್ಲ ಎಂಬುವುದನ್ನು ಟಿಂ ಇಂಡಿಯಾದ ಮಾಜಿ ನಾಯಕ ಸುನಿಲ್ ಗವಾಸ್ಕರ್ ತಿಳಿಸಿದ್ದಾರೆ.
ಭಾರತ ತಂಡ ಸದ್ಯ ವಿಶ್ವದ ನಂ.1 ಬೌಲಿಂಗ್ ವಿಭಾಗವನ್ನು ಹೊಂದಿದೆ. ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ ಹಾಗೂ ಇಶಾಂತ್ ಶರ್ಮಾ ಅವರನ್ನು ಒಳಗೊಂಡ ಭಾರತ ಬೌಲಿಂಗ್ ವಿಭಾಗ ಉತ್ತಮ ಸಾಮಾರ್ಥ್ಯ ನೀಡಬಲ್ಲ ತಂಡವಾಗಿದೆ.
ವಿಶ್ವದ ಯಾವುದೇ ತಂಡವನ್ನು ಅಲ್ಪ ಮೊತ್ತಕ್ಕೆ ಆಲ್ಔಟ್ ಮಾಡುವ ಸಾಮರ್ಥ್ಯ ಈ ತಂಡ ಹೊಂದಿದೆ ಎಂಬುದು ಅನುಭವಿಗಳ ಮಾತಾಗಿದೆ. ಆದರೆ, ಈ ಪರಿಸ್ಥಿತಿ ಹಿಂದೆ ಇರಲಿಲ್ಲ. ಹಿಂದೆಲ್ಲಾ ತಂಡ ಸಾಕಷ್ಟು ಪರದಾಡುವ ಪರಿಸ್ಥಿತಿ ಇತ್ತು. ಆ ಸಂದರ್ಭದಲ್ಲಿ ಶ್ರೇಷ್ಟ ವೇಗಿಗಳ ಕೊರತೆ ತಂಡಕ್ಕಿತ್ತು. ವಿಶ್ವ ಶ್ರೇಷ್ಟ ಬೌಲರ್ ಎನ್ನುವವರೂ ಯಾರೂ ಇರಲಿಲ್ಲ ಎಂದು ಹಿರಿಯ ಆಟಗಾರರ ಅಭಿಪ್ರಾಯ.
1970ರ ದಶಕದಲ್ಲಿ ಭಾರತ ತಂಡ ತನ್ನ ಬಲಿಷ್ಠ ಬ್ಯಾಟಿಂಗ್ ಮತ್ತು ಸ್ಪಿನ್ ಬೌಲರ್ಗಳ ಬಲದಿಂದಲೇ ಹೆಚ್ಚು ಪಂದ್ಯಗಳನ್ನು ಗೆದ್ದಿತ್ತು. ಆದರೆ ಆ ಸಂದರ್ಭದಲ್ಲಿ ಹೆಸರಿಗಷ್ಟೇ ವೇಗಿಯೊಬ್ಬನನ್ನು ಮೈದಾನಕ್ಕೆ ಇಳಿಸಲಾಗುತ್ತಿತ್ತು ಎಂದು ಅವರು ಹೇಳಿದ್ದಾರೆ. ಭಾರತ ಕೂಡ ವಿಶ್ವ ಶ್ರೇಷ್ಠ ಫಾಸ್ಟ್ ಬೌಲರ್ಗಳನ್ನು ತರಬಲ್ಲದು ಎಂಬುದನ್ನು ತೋರಿಸಿಕೊಟ್ಟಿದ್ದೆ ಕಪಿಲ್ ದೇವ್ ಎಂದು ಮಾಜಿ ನಾಯಕ ಸುನಿಲ್ ಗವಾಸ್ಕರ್ ಹೇಳಿಕೊಂಡಿದ್ದಾರೆ.