ನವದೆಹಲಿ, ಜು 06 (DaijiworldNews/SM): ಐಪಿಎಲ್ ಆತಿಥ್ಯ ವಹಿಸಲು ಇದೀಗ ಹಲವು ರಾಷ್ಟ್ರಗಳು ಮುಂದಾಗುತ್ತಿವೆ ಎಂಬ ಮಾಹಿತಿ ದೊರೆತಿದೆ. ಐಪಿಎಲ್ ಆತಿಥ್ಯ ವಹಿಸಲು ಯುಎಇ, ಶ್ರೀಲಂಕಾ ಮುಂದಾದ ಬಳಿಕ ಇದೀಗ ನ್ಯೂಜಿಲ್ಯಾಂಡ್ ಕೂಡ ಮುಂದಾಗಿದೆ ಎಂದು ಬಿಸಿಸಿಐನಿಂದ ಮಾಹಿತಿ ಲಭ್ಯವಾಗಿದೆ.
ಈಗಾಗಲೇ ಕೊರೊನಾದಿಂದಾಗಿ ಭಾರತದಲ್ಲಿ ನಡೆಯಬೇಕಿದ್ದ ಐಪಿಎಲ್ ಟೂರ್ನಿ ಮುಂದೂಡಲ್ಪಟ್ಟಿದೆ. ಆದರೆ, ಕೊರೊನಾ ಸೋಂಕು ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿರುವುದರಿಂದಾಗಿ ಸದ್ಯ ಟೂರ್ನಿ ನಡೆಸುವ ಹಾಗಿಲ್ಲ. ಈ ಹಿನ್ನೆಲೆಯಲ್ಲಿ ಐಪಿಎಲ್ ಟೂರ್ನಿಯನ್ನು ಬೇರೆಡೆಗೆ ಸ್ಥಳಾಂತರಿಸುವ ಅನಿವಾರ್ಯತೆ ಎದುರಾಗಿದೆ. ಐಪಿಎಲ್ ಟೂರ್ನಿ ಸೆಪ್ಟೆಂಬರ್-ನವೆಂಬರ್ ಪ್ರಾರಂಭದಲ್ಲಿ ನಡೆಸಲು ಬಿಸಿಸಿಐ ಚಿಂತನೆ ನಡೆಸಿದೆ.
"ಐಪಿಎಲ್ ನಡೆಸಲು ಭಾರತವೇ ಮೊದಲ ಆದ್ಯತೆಯಾಗಿದೆ. ಅದರೆ ಕೊರೋನಾ ಪ್ರಕರಣಗಳು ಹೆಚ್ಚಿದ್ದರೆ, ವಿದೇಶಗಳಲ್ಲಿ ನಡೆಸುವ ಆಯ್ಕೆಯನ್ನು ಅನಿವಾರ್ಯವಾಗಿ ಕೈಗೊಳ್ಳಲಾಗಿದೆ. ಯುಎಇ ಹಾಗೂ ಶ್ರೀಲಂಕಾದ ಬಳಿಕ ಇದೀಗ ನ್ಯೂಜಿಲ್ಯಾಂಡ್ ಸಹ ಆತಿಥ್ಯ ವಹಿಸಲು ಆಸಕ್ತಿ ತೋರಿದೆ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ ಎಂದು ವರದಿಯಾಗಿದೆ.