ನವದೆಹಲಿ, ಜೂ 27 (DaijiworldNews/SM): ಟೆಸ್ಟ್ ಕ್ರಿಕೆಟ್ ನಲ್ಲಿ ತನ್ನದೇ ಶೈಲಿಯಲ್ಲಿ ಬ್ಯಾಟಿಂಗ್ ಮಾಡುವ ಮೂಲಕ ಅಭಿಮಾನಿಗಳ ಮನ ಗೆದ್ದುಕೊಂಡಿರುವ ಚೇತೇಶ್ವರ ಪೂಜಾರ ರಾಹುಲ್ ದ್ರಾವಿಡ್ ಅವರ ಬಗ್ಗೆ ತಮಗೆ ಅನುಭವಕ್ಕೆ ಬಂದಿರುವ ವಿಚಾರವೊಂಡನ್ನು ಹಂಚಿಕೊಂಡಿದ್ದಾರೆ.
ಟೀಂ ಇಂಡಿಯಾದ ಮಾಜಿ ನಾಯಕ ರಾಹುಲ್ ದ್ರಾವಿಡ್, ತಮ್ಮ ಜೀವನದಲ್ಲಿ ಅಪಾರ ಪ್ರಮಾಣದಲ್ಲಿ ಪ್ರಭಾವ ಬೀರಿದ್ದಾರೆ. ಅದನ್ನು ಎಂದಿಗೂ ನಾನು ಮರೆಯಲು ಅಸಾಧ್ಯ ಎಂದಿದ್ದಾರೆ. ಇದಲ್ಲದೆ ಕ್ರಿಕೆಟ್ ನಿಂದ ಹೊರಗುಳಿಯುವುದರ ಪ್ರಾಮುಖ್ಯತೆಯನ್ನು ದ್ರಾವಿಡ್ ತನಗೆ ಕಲಿಸಿಕೊಟ್ಟಿದ್ದಾರೆ ಎಂದು ಚೇತೇಶ್ವರ್ ಪೂಜಾರ ತಿಳಿಸಿದ್ದಾರೆ.
ಕ್ರಿಕೆಟ್ ಕೆರಿಯರ್ ಬಗ್ಗೆ ಬಹಳಷ್ಟು ಗೊಂದಲದಲ್ಲಿದ್ದೆ. ಈ ಸಂದರ್ಭದಲ್ಲಿ ರಾಹುಲ್ ದ್ರಾವಿಡ್ ಅವರೊಂದಿಗೆ ಮಾತನಾಡಿದೆ. ಬಳಿಕ ಏನು ಮಾಡಬೇಕೆಂಬುವುದು ಸ್ಪಷ್ಟವಾಯಿತು ಎಂದು ಅವರು ಸಂದರ್ಶನವೊಂದರಲ್ಲಿ ವಿವರಿಸಿದ್ದಾರೆ. ಇದಲ್ಲದೆ, ವೈಯುಕ್ತಿಕ ಬದುಕು ಹಾಗೂ ವೃತ್ತಿ ಜೀವನದ ನಿರ್ವಹಣೆ ಬಗ್ಗೆಯೂ ರಾಹುಲ್ ತಿಳಿಸಿದ್ದರು ಎಂದು ಅವರು ಹೇಳಿದ್ದಾರೆ.
ಕ್ರಿಕೆಟ್ ಕಡೆಗೆ ಗಮನ ನೀಡುವಂತೆ ಹೆಚ್ಚಿನ ಜನ ಹೇಳುತ್ತಿದ್ದರು. ಎಲ್ಲರೂ ಹೇಳುವಂತೆ ನಾನು ಕೂಡ ನಡೆದುಕೊಂಡಿದ್ದೆ. ಆದರೆ, ಕ್ರಿಕೆಟ್ ಜೀವನಕ್ಕಿಂತ ಮಿಗಿಲಾದುದು ಮತ್ತೊಂದು ಜೀವನ ಇದೆ ಎಂಬುವುದು ಕ್ರಿಕೆಟ್ ನಿಂದ ದೂರ ಸರಿದ ಸಂದರ್ಭದಲ್ಲಿ ಅರ್ಥವಾಯಿತು ಎಂದು ಅವರು ವಿವರಿಸಿದ್ದಾರೆ.