ಮುಂಬೈ, ಜೂ 13 (Daijiworld News/MSP): ಭಾರತದ ಅತ್ಯಂತ ಹಿರಿಯ, ಪ್ರಥಮ ದರ್ಜೆ ಕ್ರಿಕೆಟರ್ ವಸಂತ್ ರೈಜಿ (100) ಮುಂಬೈನಲ್ಲಿ ಇಂದು ಬೆಳಗ್ಗೆ ನಿಧನರಾಗಿದ್ದಾರೆ. ವಯೋಸಹಜ ಕಾರಣದಿಂದ ರೈಜಿ ಅವರು ಇಂದು ಬೆಳಗ್ಗಿನ ಜಾವ 2.20 ರ ಸುಮಾರಿಗೆ ದಕ್ಷಿಣ ಮುಂಬೈನ ವಾಲ್ಕೇಶ್ವರದಲ್ಲಿರುವ ಅವರ ನಿವಾಸದಲ್ಲಿ ಮೃತಪಟ್ಟಿದ್ದಾರೆ ಎಂದು ಅವರ ಕುಟುಂಬಸ್ಥರು ತಿಳಿಸಿದ್ದಾರೆ.
ರೈಜಿ ಅವರು 1940 ರಲ್ಲಿ 9 ಪ್ರಥಮ ದರ್ಜೆ ಕ್ರಿಕೆಟ್ ಪಂದ್ಯಗಳಲ್ಲಿ ಆಡಿದ್ದಾರೆ. ಒಟ್ಟು 277 ರನ್ ಗಳಿಸಿದ್ದಾರೆ. ಅವರು ವೈಯಕ್ತಿಕವಾಗಿ 68 ಗರಿಷ್ಠ ವೈಯಕ್ತಿಕ ರನ್ ಗಳಿಸಿದ್ದಾರೆ. 1939 ರಲ್ಲಿ ನಾಗ್ಪುರದಲ್ಲಿ ಕ್ರಿಕೆಟ್ ಕ್ಲಬ್ ಆಫ್ ಇಂಡಿಯಾ ತಂಡದ ಪರ ಸೆಂಟ್ರಲ್ ಪ್ರಾವಿನ್ಸಸ್ ಪರ ಆಡುವ ಮೂಲಕ ಕ್ರಿಕೆಟ್ ರಂಗಕ್ಕೆ ಕಾಲಿಟ್ಟಿದ್ದರು.
ಭಾರತವು ದಕ್ಷಿಣ ಮುಂಬೈನ ಬಾಂಬೆ ಜಿಮ್ಖಾನಾದಲ್ಲಿ ಮೊತ್ತ ಮೊದಲ ಟೆಸ್ಟ್ ಪಂದ್ಯ ಆಡಿದ್ದಾಗ ರೈಜಿಗೆ ಆಗ ಕೇವಲ 13 ವರ್ಷವಾಗಿತ್ತು . ಕ್ರಿಕೆಟ್ ಇತಿಹಾಸತಜ್ಞ ಹಾಗೂ ಲೆಕ್ಕಪರಿಶೋಧಕರೂ ಆಗಿದ್ದ ರೈಜಿ ಜನವರಿಯಲ್ಲಿ 100ನೇ ವಯಸ್ಸಿಗೆ ಕಾಲಿಟ್ಟ ಸಂದರ್ಭದಲ್ಲಿ ಕ್ರಿಕೆಟ್ ಐಕಾನ್ ಸಚಿನ್ ತೆಂಡುಲ್ಕರ್ ಹಾಗೂ ಆಸ್ಟ್ರೇಲಿಯದ ಮಾಜಿ ನಾಯಕ ಸ್ಟೀವ್ ವಾ ಅವರು ರೈಜಿ ನಿವಾಸಕ್ಕೆ ಭೇಟಿ ನೀಡಿ ಅಭಿನಂದಿಸಿದ್ದರು.