ನವದೆಹಲಿ: ಜೂ 01 (DaijiworldNews/SM): ಭಾರತೀಯ ತಂಡ ಕಂಡ ಅಪ್ರತಮ ನಾಯಕರಾಗಿ ಗುರುತಿಸಿಕೊಂಡಿದ್ದ ಹಾಗೂ ಕ್ರಿಕೆಟ್ ಜಗತ್ತಿನ ಮೈಲಿಗಲ್ಲು ಮಹೇಂದ್ರ ಸಿಂಗ್ ಧೋನಿ ಅಂತರಾಷ್ಟ್ರೀಯ ಕ್ರಿಕೆಟ್ ನಿಂದ ದೂರ ಉಳಿದುಕೊಂಡಿದ್ದಾರೆ. ಇನ್ನು ಮುಂದೆ ಅವರು ಅಂತರಾಷ್ಟ್ರೀಯ ಕ್ರಿಕೆಟ್ ನಲ್ಲಿ ಕಾಣಿಸಿಕೊಳ್ಳುವುದು ಅನುಮಾನ ಎನ್ನಲಾಗುತ್ತಿದೆ. ಧೋನಿ ಅಂತರಾಷ್ಟ್ರೀಯ ಆಟ ಮುಗಿಸಿದ್ದಾರೆ. ಟೀಂ ಇಂಡಿಯಾದಲ್ಲಿ ಇನ್ನು ಮುಂದೆ ಕಾಣಿಸಿಕೊಳ್ಳುವುದಿಲ್ಲ ಎಂದು ಹರ್ಭಜನ ಸಿಂಗ್ ತಿಳಿಸಿದ್ದಾರೆ.
ಕಳೆದ ವರ್ಷ ಮೇ ತಿಂಗಳಲ್ಲಿ ಅಂತ್ಯಗೊಂಡ ಐಸಿಸಿ ವಿಶ್ವಕಪ್ ನಲ್ಲಿ ಧೋನಿ ಕಡೆಯ ಬಾರಿಗೆ ಆಡಿದ್ದರು. ಅದರ ಬಳಿಕ ಅವರು ಅಂತರಾಷ್ಟ್ರೀಯ ಕ್ರಿಕೆಟ್ ನಲ್ಲಿ ಕಾಣಿಸಿಕೊಂಡಿಲ್ಲ. ಐಸಿಸಿ ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿ ವೇಳೆ ಸೆಮಿಫೈನಲ್ ಪಂದ್ಯದಲ್ಲಿ ಭಾರತ ತಂಡ ನ್ಯೂಜಿಲೆಂಡ್ ವಿರುದ್ಧ ಸೋತ ನಂತರ ಧೋನಿ ತೆರೆ ಮರೆಗೆ ಸರಿದಿದ್ದಾರೆ.
ಇನ್ನು ಕಳೆದ ವಾರ ಧೋನಿ ನಿವೃತ್ತಿಯ ಸುದ್ದಿ ಇದ್ದಕ್ಕಿದ್ದಂತೆ ಸೋಷಿಯಲ್ ಮೀಡಿಯಾಗಳಲ್ಲಿ ಸ್ಪೋಟಗೊಂಡಿತ್ತು. ಆದರೆ ಇದೆಲ್ಲಾ ಕೇವಲ ವದಂತಿ ಎಂಬುದನ್ನು ಧೋನಿ ಅವರ ಧರ್ಮಪತ್ನಿ ಸಾಕ್ಷಿ ಸಿಂಗ್ ಸ್ಪಷ್ಟ ಪಡಿಸಿದ್ದರು. ಅನುಭವಿ ಆಫ್ ಸ್ಪಿನ್ನರ್ ಮತ್ತು ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರ ಆಡುತ್ತಿರುವ ಹರ್ಭಜನ್ ಸಿಂಗ್ ಕ್ಯಾಪ್ಟನ್ ಕೂಲ್ ಅವರ ಅಂತಾರಾಷ್ಟ್ರೀಯ ಕ್ರಿಕೆಟ್ ವೃತ್ತಿಬದುಕು ಅಂತ್ಯಗೊಂಡಿದೆ ಎಂದಿದ್ದಾರೆ.