ನವದೆಹಲಿ, ಮೇ 26 (Daijiworld News/MSP): ಎರಡು ಬಾರಿ ವಿಶ್ವಕಪ್ ವಿಜೇತ, 2007ರ ಟಿ 20 ವಿಶ್ವಕಪ್ ಮತ್ತು 2011 ಏಕದಿನ ವಿಶ್ವಕಪ್ ವಿಜೇತ ಆಫ್ ಸ್ಪಿನ್ನರ್ ಹರ್ಭಜನ್ ಸಿಂಗ್ ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲೂ ಪುನರಾಗಮನದ ಭರವಸೆಯನ್ನು ವ್ಯಕ್ತಪಡಿಸಿದ್ದಾರೆ.
"ನಾನಿನ್ನೂ ಫಿಟ್ ಆಗಿದ್ದು, ಟೀಂ ಇಂಡಿಯಾ ಪರವಾಗಿ ಅಂತಾರಾಷ್ಟ್ರೀಯ ಪಂದ್ಯವಾಡಲು ಸಿದ್ಧ" ಎಂದು ಹೇಳುವ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯಾಟಕ್ಕೆ ರೀ ಎಂಟ್ರಿ ಕೊಡುವ ಹುಮ್ಮಸ್ಸಿನಲ್ಲಿದ್ದಾರೆ.
"ಐಪಿಎಲ್ನಲ್ಲಿ ನಾನು ಉತ್ತಮವಾಗಿ ಬೌಲಿಂಗ್ ಮಾಡಲು ಸಾಧ್ಯವಾಗಿದೆ, ಬೌಲರ್ಗಳಿಗೆ ಇದು ತುಂಬಾ ಕಷ್ಟಕರವಾದ ಪಂದ್ಯಾವಳಿಯಾಗಿದೆ ಏಕೆಂದರೆ ಮೈದಾನಗಳು ಕಿರಿದಾಗಿವೆ ಮತ್ತು ವಿಶ್ವ ಕ್ರಿಕೆಟ್ನ ಎಲ್ಲ ಉನ್ನತ ಆಟಗಾರರು ಐಪಿಎಲ್ನಲ್ಲಿ ಆಡುತ್ತಾರೆ .ಐಪಿಎಲ್ ನಲ್ಲಿ ವಿಶ್ವ ದರ್ಜೆಯ ಆಟಗಾರರ ಎದುರು ಬೌಲಿಂಗ್ ಮಾಡುತ್ತೇನೆ. ಪವರ್ ಪ್ಲೇ ಮತ್ತು ಮಿಡಲ್ ಆರ್ಡರ್ ನಲ್ಲಿ ಬೌಲಿಂಗ್ ನಡೆಸುತ್ತೇನೆ ಮತ್ತು ಸಾಕಷ್ಟು ವಿಕೆಟ್ ಪಡೆದಿದ್ದೇನೆ. ಹೀಗಾಗಿ ನಾನು ಅಂತಾರಾಷ್ಟ್ರೀಯ ಪಂದ್ಯವಾಡಲು ಸಿದ್ಧ" ಎಂದು ಭಜ್ಜಿ ಹೇಳಿದ್ದಾರೆ.
ಐಪಿಎಲ್ ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರ ಆಡುವ ಹರ್ಭಜನ್ ಸಿಂಗ್ ಧೋನಿ ಪಾಳಯದ ಪ್ರಮುಖ ಸ್ಪಿನ್ನರ್ ಆಗಿದ್ದಾರೆ.2016 ರ ಏಷ್ಯಾಕಪ್ನಲ್ಲಿ ಟಿ 20 ಐ ಯಲ್ಲಿ ಕೊನೆಯ ಬಾರಿಗೆ ಭಾರತ ಪರ ಆಡಿದ್ದರೂ, ಹರ್ಭಜನ್ ಐಪಿಎಲ್ನಲ್ಲಿ ಸ್ಥಿರ ಪ್ರದರ್ಶನ ನೀಡಿದ್ದಾರೆ.