ನವದೆಹಲಿ, ಮೇ 20 (DaijiworldNews/SM): ಕಳೆದ ಒಂದು ದಶಕದಿಂದ ಕ್ರಿಕೆಟ್ ಅಭಿಮಾನಿಗಳನ್ನು ರಂಜಿಸುವ ಚುಟುಕು ಕ್ರಿಕೆಟ್ ಐಪಿಎಲ್ ಈ ಬಾರಿ ಅಭಿಮಾನಿಗಳಿಗೆ ನಿರಾಸೆಯನ್ನುಂಟು ಮಾಡಿದೆ. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ, ಇದೀಗ ಐಪಿಎಲ್ ಮುಕ್ಕಾಲು ಭಾಗ ಪೂರ್ಣವಾಗುತ್ತಿತ್ತು. ಆದರೆ, ಕೊರೊನಾ ಕಾಟದಿಂದ ಟೂರ್ನಿ ಮುಂದೂಡಲ್ಪಟ್ಟಿದೆ. ಸದ್ಯ ಯಾವಾಗ ಆರಂಭಗೊಳ್ಳಲಿದೆ ಎನ್ನುವ ನಿರೀಕ್ಷೆ ಅಭಿಮಾನಿಗಳಲ್ಲಿದ್ದು, ಸೆಪ್ಟೆಂಬರ್ ತಿಂಗಳಲ್ಲಿ ಆರಂಭಗೊಳ್ಳಬಹುದೆಂಬ ನಿರೀಕ್ಷೆಯಿದೆ.
ಸೆಪ್ಟೆಂಬರ್ ತಿಂಗಳ 25ರಿಂದ ನವೆಂಬರ್ 1ರವರೆಗೆ 13ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯನ್ನು ಆಯೋಜಿಸಲು ಬಿಸಿಸಿಐ ಚಿಂತನೆ ನಡೆಸಿದೆ ಎಂದು ತಿಳಿದುಬಂದಿದೆ.
ವೇಳಾಪಟ್ಟಿಯಂತೆ ಮಾರ್ಚ್ 29ರಿಂದ ಮೇ 24ರವರೆಗೆ ಐಪಿಎಲ್ 2020 ಟೂರ್ನಿ ನಡೆಯಬೇಕಿತ್ತು. ಆದರೆ, ಕೋವಿಡ್-19 ಮಹಾಮಾರಿ ಇದಕ್ಕೆ ತನ್ನೀರೆರಚಿದೆ. ಸೋಂಕು ಹರಡದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಎಲ್ಲಾ ಕ್ರೀಡಾಕೂಟಗಳನ್ನು ತಾತ್ಕಾಲಿಕವಾಗಿ ರದ್ದುಗೊಳಿಸಲಾಗಿತ್ತು. ಇದರ ನೇರ ಪ್ರಭಾವ ಚುಟುಕು ಕ್ರಿಕೆಟ್ ಐಪಿಎಲ್ ಗೆ ತಟ್ಟಿತ್ತು. ಇದೀಗ ನಿರಾಸೆಯಲ್ಲಿರುವ ಅಭಿಮಾನಿಗಳಿಗೆ ಆಸೆಯನ್ನು ಜೀವಂತವಾಗಿ ಉಳಿಸೋಕೆ ಗ್ರೀನ್ ಸಿಗ್ನಲ್ ಸಿಕ್ಕಂತಾಗಿದೆ.
ಇನ್ನೊಂದೆಡೆ ಐಸಿಸಿ ಟಿ20 ಕ್ರಿಕೆಟ್ ವಿಶ್ವಕಪ್ ಟೂರ್ನಿ ರದ್ದಾಗುವ ಲಕ್ಷಣಗಳು ಬಹುತೇಕವಾಗಿ ಗೋಚರಿಸುತ್ತಿವೆ. ಇದೇ ಕಾರಣದಿಂದ ಆ ಅವಧಿಯಲ್ಲಿ ಐಪಿಎಲ್ ಆಯೋಜನೆಗೆ ಬಿಸಿಸಿಐ ಚಿಂತನೆ ನಡೆಸಿದೆ ಎಂದು ತಿಳಿದುಬಂದಿದೆ.