ನವದೆಹಲಿ, ಮೇ 11 (DaijiworldNews/PY) : ಆಸ್ಟ್ರೇಲಿಯಾ ತಂಡ ಇತ್ತೀಚೆಗೆ ಐಸಿಸಿ ಟೆಸ್ಟ್ ಶ್ರೇಯಾಂಕ ಪಟ್ಟಿಯಲ್ಲಿ ಟೀಂ ಇಂಡಿಯಾವನ್ನು ಹಿಂದಿಕ್ಕಿ ಟಾಪ್ ಸ್ಥಾನವನ್ನು ಗಿಟ್ಟಿಸಿಕೊಂಡಿತ್ತು. ಆಸೀಸ್ ಐಸಿಸಿ ಸದಸ್ಯ ರಾಷ್ಟ್ರಗಳ ತಂಡಗಳ ಪ್ರದರ್ಶನದ ಆಧಾರದ ಮೇಲೆ ಶ್ರೇಯಾಂಕ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದುಕೊಂಡಿತ್ತು. ಇದರ ಪರಿಣಾಮ 2016 ಅಕ್ಟೋಬರ್ನಿಂದ ಸತತ 42 ತಿಂಗಳು ನಂ.1 ಟೆಸ್ಟ್ ಶ್ರೇಯಾಂಕ ಸ್ಥಾನದಲ್ಲಿದ್ದ ಟೀಂ ಇಂಡಿಯಾ ತನ್ನ ರ್ಯಾಂಕಿಂಗ್ ಕಳೆದುಕೊಂಡಿದ್ದು, ಅಲ್ಲದೇ ಮೂರನೇ ಸ್ಥಾನಕ್ಕೆ ಇಳಿದಿತ್ತು.
ಈ ಬಗ್ಗೆ ಟೀಂ ಇಂಡಿಯಾದ ಮಾಜಿ ಆಟಗಾರ, ಸಂಸದ ಗೌತಮ್ ಗಂಭೀರ್ ಅವರು ಅಸಮಾಧಾನ ವ್ಯಕ್ತಪಡಿಸಿದ್ದು, ಆಸ್ಟ್ರೇಲಿಯಾ ತಂಡಕ್ಕೆ ಯಾವ ಆಧಾರದ ಮೇಲೆ ನಂ.1 ಸ್ಥಾನ ನೀಡಿದ್ದೀರಿ ಎಂದು ಕೇಳಿದ್ದು, ಶ್ರೇಯಾಂಕ ಪಟ್ಟಿಯ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ.
ಟೀಂ ಇಂಡಿಯಾ ಸಾಕಷ್ಟು ಸಮಯದಿಂದ ನಿರಂತರವಾಗಿ ಜಯಗಳನ್ನು ಪಡೆದುಕೊಳ್ಳುತ್ತಿದೆ. ಆದರೆ, ಟಾಪ್ ಪಟ್ಟವನ್ನು ಆಸ್ಟ್ರೇಲಿಯಾ ಹೇಗೆ ಪಡೆದುಕೊಂಡಿತು ಎಂಬುವುದು ಅರ್ಥವಾಗುತ್ತಿಲ್ಲ. ಅಲ್ಲದೇ ಟೀಂ ಇಂಡಿಯಾ ಮೂರನ್ನೇ ಸ್ಥಾನಕ್ಕೆ ಕುಸಿದಿದ್ದು ಆಶ್ಚರ್ಯವಾಗಿದೆ. ಐಸಿಸಿ ನೀಡುವ ಅಂಕಗಳು, ಶ್ರೇಯಾಂಕ ವಿಧಾನವು ಸರಿಯಿಲ್ಲ. ಪ್ರದರ್ಶನದ ಆಧಾರದ ಮೇಲೆ ನೋಡುವುದಾದರೆ, ಇಂದಿಗೂ ಟೀಂ ಇಂಡಿಯಾ ಮೊದಲ ಸ್ಥಾನದಲ್ಲಿರಬೇಕಾಗಿತ್ತು. ಟೆಸ್ಟ್ ಚಾಂಪಿಯನ್ ಪ್ರಾರಂಭವಾದ ನಂತರವೂ ತವರು ನೆಲದಲ್ಲಿ ಮತ್ತು ವಿದೇಶಿ ನೆಲದಲ್ಲಿ ಪಂದ್ಯ ಗೆದ್ದರೂ ಒಂದೇ ಅಂಕಗಳನ್ನು ನೀಡುವುದು ಸರಿಯಲ್ಲ. ಟೀಂ ಇಂಡಿಯಾ ವಿದೇಶಿ ನೆಲದಲ್ಲಿ ಹಾಗೂ ತವರು ನೆಲದಲ್ಲಿ ಉತ್ತಮವಾದ ಪ್ರದರ್ಶನ ನೀಡಿದೆ ಎಂದು ತಿಳಿಸಿದ್ದಾರೆ.
ಆಸ್ಟ್ರೇಲಿಯಾ ತಂಡವು ಮೇ ತಿಂಗಳ ಮೊದಲ ವಾರದಲ್ಲಿ ಬಿಡುಗಡೆಯಾಗಿದ್ದ ಐಸಿಸಿ ಶ್ರೇಯಾಂಕ ಪಟ್ಟಿಯ ಅನ್ವಯ 116 ಅಂಕ ಪಡೆದಿದ್ದು. ಮೊದಲ ಸ್ಥಾನ ಪಡೆದಿತ್ತು. ನಂತರ 115 ಅಂಕ ಪಡೆದಿದ್ದ ನ್ಯೂಜಿಲೆಂಡ್, 114 ಅಂಕ ಪಡೆದಿದ್ದ ಟೀಂ ಇಂಡಿಯಾ ಕ್ರಮವಾಗಿ 2 ಮತ್ತು 3ನೇ ಸ್ಥಾನ ಪಡೆದಿವೆ. 2003ರಲ್ಲಿ ಟೆಸ್ಟ್ ಶ್ರೇಯಾಂಕ ಪಟ್ಟಿಯನ್ನು ಪ್ರಾರಂಭಿಸಿದ ನಂತರ ಪ್ರಥಮ ಬಾರಿಗೆ ಕಡಿಮೆ ಅಂತರದಲ್ಲಿ ಟಾಪ್ ಮೂರು ತಂಡಗಳು ಸ್ಥಾನ ಪಡೆದಿವೆ. 2016-17ರಿಂದ ಕೊಹ್ಲಿ ನಾಯಕತ್ವದ ತಂಡದ ಉತ್ತಮ ಪ್ರದರ್ಶನ ನೀಡುತ್ತಾ ನಂ.1 ಸ್ಥಾನದಲ್ಲಿ ಮುಂದುವರಿದಿತ್ತು. ಐಸಿಸಿ ನಿಯಮಗಳ ಪ್ರಕಾರ, ಮೇ 2009 ರಿಂದ ಲಭಿಸಿದ ಫಲಿತಾಂಶಗಳ ಅನ್ವಯ ಆಸ್ಟ್ರೇಲಿಯಾ ನಂ.1 ಪಟ್ಟ ಪಡೆದುಕೊಂಡಿದೆ. ಉಳಿದಂತೆ ಐಸಿಸಿ ಟೆಸ್ಟ್ ಚಾಂಪಿಯನ್ಶಿಪ್ ಪಟ್ಟಿಯಲ್ಲಿ ಭಾರತ ಮೊದಲ ಸ್ಥಾನದಲ್ಲಿದೆ.