ನವದೆಹಲಿ, ಮೇ.02 (DaijiworldNews/PY) : ವಿರಾಟ್ ಕೊಹ್ಲಿ ಮತ್ತು ಉಪ ನಾಯಕ ರೋಹಿತ್ ಶರ್ಮಾ ನಂತರ ಕನ್ನಡಿಗ ಕೆ.ಎಲ್.ರಾಹುಲ್ ಟೀಂ ಇಂಡಿಯಾದ ನಾಯಕನಾಗುವ ಸಾಮರ್ಥ್ಯ ಹೊಂದಿದ್ದಾರೆ ಎಂದು ಭಾರತದ ವೇಗದ ಬೌಲರ್ ಎಸ್.ಶ್ರೀಶಾಂತ್ ಹೇಳಿದ್ದಾರೆ.
ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, ಕನ್ನಡಿಗ, ಟೀಂ ಇಂಡಿಯಾ ಯುವ ಆಟಗಾರ ಕೆ.ಎಲ್.ರಾಹುಲ್ ಭಾರತ ಕ್ರಿಕೆಟ್ ತಂಡದ ಮುಂದಿನ ನಾಯಕ ಎಂದು ತಿಳಿಸಿದ್ದಾರೆ.
ರಾಹುಲ್ ಅವರಲ್ಲಿ ಯಾವುದೇ ಒಬ್ಬ ಆಟಗಾರ ನಾಯಕನಾಗಲು ಬೇಕಾದ ಎಲ್ಲಾ ಗುಣಗಳಿವೆ. ಅವರು ಯಾವುದೇ ಕ್ರಮಾಂಕದಲ್ಲೂ ಬ್ಯಾಟಿಂಗ್ ಮಾಡುತ್ತಾರೆ. ತಮ್ಮ ಜವಾಬ್ದಾರಿಯನ್ನು ಗಂಭೀರವಾಗಿ ಪರಿಗಣಿಸಿ ತಂಡಬ ಬಗ್ಗೆ ಯೋಚಿಸಿ ಆಡುತ್ತಾರೆ. ಅವರು ವಿರಾಟ್ ಕೊಹ್ಲಿ ಅವರಂತೆ ಶ್ರದ್ದೆಯಿಂದ ಆಡುತ್ತಾರೆ ಎಂದು ಶ್ರೀಶಾಂತ್ ಹೇಳಿದರು.
ವಿರಾಟ್ ಕೊಹ್ಲಿ ಅವರನ್ನು ಕ್ರಿಕೆಟ್ ದಂತಕಥೆ ಸಚಿನ್ ತೆಂಡೂಲ್ಕರ್ ಅವರಿಗೆ ಹೋಲಿಸಲು ಸಾಧ್ಯವಿಲ್ಲ. ಏಕೆಂದರೆ, ಅವರಿಬ್ಬರೂ ತಮ್ಮದೇ ಆದ ಆಟದ ಶೈಲಿಯನ್ನು ಹೊಂದಿದ್ದಾರೆ. ವಿರಾಟ್ ಕ್ರಿಕೆಟ್ ರಾಜನಾಗಿದ್ದರೆ, ಕ್ರಿಕೆಟ್ ದೇವರು ಸಚಿನ್ ಎಂದರು.
ಮೊಹಮ್ಮದ್ ಶಮಿ ಮತ್ತು ಜಸ್ಪ್ರೀತ್ ಬುಮ್ರಾ ಅವರು ತುಂಬಾ ಅಪಾಯಕಾರಿ ಬೌಲರ್ಗಳು. ಭಾರತ ತಂಡದಲ್ಲಿ ಸ್ಥಿರವಾಗಿ ಹಾಗೂ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಹೇಳಿದರು.
ಈಗ ಟೀಂ ಇಂಡಿಯಾದ ಪರಿಸ್ಥಿತಿ ಬದಲಾಗಿದೆ. ಈಗಿನ ಯುವ ಆಟಗಾರರು ತಮ್ಮ ಹಿರಿಯರನ್ನು ಹೆಚ್ಚು ಗೌರವದಿಂದ ಕಾಣುವುದಿಲ್ಲ ಎಂದು ಕೆಲ ದಿನಗಳ ಹಿಂದೆ ಟೀಂ ಇಂಡಿಯಾದ ಮಾಜಿ ಆಲ್ರೌಂಡರ್ ಯುವಿ ಅಂದಿದ್ದರು. ಈ ಬಗ್ಗೆ ಮಾತನಾಡಿದ ಶ್ರೀಶಾಂತ್ ಅವರು, ಈಗ ಸಮಯ ಬದಲಾಗಿದೆ. ಈಗಿರುವ ತಂಡಕ್ಕೂ ಹಿಂದಿನ ತಂಡಕ್ಕೂ ತುಂಬಾ ವ್ಯತ್ಯಾಸವಿದೆ. ಈಗ ಆಟಗಾರರಿಗೆ ಐಪಿಎಲ್ನಂತಹ ಅಧಿಕ ಅವಕಾಶಗಳಿವೆ. ಈ ಮೊದಲು ಇಂತಹ ಟೂರ್ನಿಗಳು ಇರಲಿಲ್ಲ. ಪ್ರಸ್ತುತ ಆಟಗಾರರಂತೆ ನಾನು ಯೋಚನೆ ಮಾಡಿದರೆ, ಅದು ಸರಿಯಂತೆ ಕಾಣುತ್ತದೆ. ನಾನು ಕೇರಳ ರಣಜಿ ತಂಡಕ್ಕಾಗಿ ಆಡುತ್ತದ್ದರೂ, ನನಗೆ ಅಲ್ಲಿ ಸಾಕಷ್ಟು ಗೌರವ ಸಿಗುತ್ತಿತ್ತು ಎಂದರು.