ಮೆಲ್ಬೋರ್ನ್, ಏ 17(DaijiworldNews/SM): ಕೊರೊನಾ ಸೋಂಕಿನಿಂದಾಗಿ ವಿಶ್ವವೇ ಸಂಕಷ್ಟಕ್ಕೀಡಾಗಿದೆ. ಪ್ರಮುಖ ಕ್ರಿಕೆಟ್ ಸರಣಿಗಳು ಮುಂದುಡಲ್ಪಟ್ಟಿವೆ. ಟಿ-20 ವಿಶ್ವಕಪ್ ಪಂದ್ಯಾವಳಿಯನ್ನು ಮುಂದೂಡಬೇಕೇ ಅಥವಾ ಬೇಡವೇ ಎಂಬುವುದನ್ನು ಸೂಕ್ತ ಸಂದರ್ಭದಲ್ಲಿ ನಿರ್ಧರಿಸಲಾಗುವುದು ಎಂದು ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ ತಿಳಿಸಿದೆ.
ಟಿ-20 ವಿಶ್ವಕಪ್ ಆಸ್ಟ್ರೇಲಿಯಾದಲ್ಲಿ ಅಕ್ಟೋಬರ್ 18ರಿಂದ ನವೆಂಬರ್ 15ರ ವರೆಗೆ ನಿಗದಿಯಾಗಿದೆ. ಆದರೆ, ಇದೀಗ ಇದಕ್ಕೆ ಕೊರೊನಾ ಎಫೆಕ್ಟ್ ತಟ್ಟಿದೆ. ಪರಿಸ್ಥಿತಿ ಹತೋಟಿಗೆ ತರಲು ವಿಶ್ವವೇ ಪಣತೊಟ್ಟಿದೆ. ಈ ನಡುವೆ ಟಿ-20 ವಿಶ್ವಕಪ್ ಸಹ ಮುಂದೂಡುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಆದರೆ ಇದೀಗ ಐಸಿಸಿ ವಕ್ತಾರರು ಪ್ರತಿಕ್ರಿಯೆ ನೀಡಿದ್ದು, ಸಾಂಕ್ರಾಮಿಕ ರೋಗ ಕೊರೋನಾ ವೈರಸ್ ನ ಪರಿಸ್ಥಿತಿಯನ್ನು ಆಧರಿಸಿ ನಮಗೆ ಲಭ್ಯವಿರುವ ಎಲ್ಲಾ ಆಯ್ಕೆಗಳನ್ನು ಪರಿಶೀಲಿಸುತ್ತಿದ್ದೇವೆ. ಟಿ-20 ವಿಶ್ವಕಪ್ ಗೆ ಇನ್ನೂ ಆರು ತಿಂಗಳ ಸಮಯ ಇದೆ. ಈ ಸಂಬಂಧ ಆಸ್ಟ್ರೇಲಿಯಾ ಸರ್ಕಾರ ಸೇರಿದಂತೆ ತನ್ನ ಪಾಲುದಾರರೊಂದಿಗೆ ಚರ್ಚಿಸಿದ ನಂತರ ಈ ಬಗ್ಗೆ ಸೂಕ್ತ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದಿದ್ದಾರೆ.