ಉಜಿರೆ , ಮಾ.14 (DaijiworldNews/PY) : ಮಂಗಳೂರು ವಿಶ್ವವಿದ್ಯಾನಿಲಯದ ಅಂತರ್ಕಾಲೇಜು ಮಟ್ಟದ ವೇಟ್ ಲಿಫ್ಟಿಂಗ್ ಸ್ಪರ್ಧೆಯ ಪುರುಷರ ವಿಭಾಗದ ಸಮಗ್ರ ಪ್ರಶಸ್ತಿಯನ್ನು ಉಜಿರೆ ಎಸ್.ಡಿ.ಎಂ ಕಾಲೇಜು ಪಡೆದುಕೊಂಡಿತು. ಮಹಿಳೆಯರ ವಿಭಾಗದ ಸಮಗ್ರ ಪ್ರಶಸ್ತಿಯನ್ನು ಮೂಡುಬಿದಿರೆಯ ಆಳ್ವಾಸ್ ಕಾಲೇಜು ಮುಡಿಗೇರಿಸಿಕೊಂಡಿತು.
ಎಸ್,ಡಿ.ಎಂ ಕಾಲೇಜಿನ ತಂಡಕ್ಕೆ ರೋಲಿಂಗ್ ಪ್ರೊ. ಅನಗಲ್ಲಿ ರಿಚಾರ್ಡ್ ರೆಬೆಲ್ಲೂ ಹೆಸರಿನ ಟ್ರೋಫಿ ಹಾಗೂ ಆಳ್ವಾಸ್ ಕಾಲೇಜು ತಂಡಕ್ಕೆ ಶಿರ್ವ ಬ್ಲೊಸಮ್ ಮ್ಯಾನ್ಶನ್ ಸೆಲೆಸ್ಟಿನ್ ಹೆಸರಿನ ಟ್ರೋಫಿ ಲಭಿಸಿತು. ಈ ಸ್ಪರ್ಧೆಯ ರನ್ನರ್ ಅಪ್ ಪ್ರಾಶಸ್ತ್ಯ (ಪುರುಷ ವಿಭಾಗ) ಮೂಡುಬಿದಿರೆಯ ಆಳ್ವಾಸ್ ಕಾಲೇಜು, ಮಹಿಳಾ ವಿಭಾಗದ ರನ್ನರ್ ಅಪ್ ಪ್ರಶಸ್ತಿಯನ್ನು ಉಜಿರೆಯ ಎಸ್.ಡಿ.ಎಂ ಕಾಲೇಜಿನ ತಂಡ ತನ್ನದಾಗಿಸಿಕೊಂಡಿತು.
ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜು ಹಾಗೂ ಮಂಗಳೂರು ವಿಶ್ವವಿದ್ಯಾನಿಲಯದ ದೈಹಿಕ ಶಿಕ್ಷಣ ವಿಭಾಗದ ಸಹಯೋಗದೊಂದಿಗೆ ಆಯೋಜಿಸಲಾಗಿದ್ದ ಎರಡು ದಿನಗಳ ಮಂಗಳೂರು ವಿ.ವಿ ಅಂತರ್ ಕಾಲೇಜು ಮಟ್ಟದ ವೈಟ್ ಲಿಫ್ಟಿಂಗ್ ಸ್ಪರ್ಧೆ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಎಸ್.ಡಿ.ಎಂ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷ ಪ್ರೊ.ಎಸ್ ಪ್ರಭಾಕರ್ ವಹಿಸಿದ್ದರು. ವಿಜೇತರಿಗೆ ಟ್ರೋಫಿ ನೀಡಿ ಗೌರವಿಸಿದರು.
ಈ ಸಂದರ್ಭ ಮಾತನಾಡಿದ ಅವರು, "ಕೆಲಸದಲ್ಲಿ ದೃಢತೆಯೊಂದಿಗೆ ಪರಿಶ್ರಮವಿದ್ದರೆ, ಯಶಸ್ಸು ಸಿಗುತ್ತದೆ. ದೇಹಾದಾರ್ಢ್ಯತೆಗೆ ಉತ್ತಮ ಆರೋಗ್ಯ, ಸಾಧಿಸುವ ಛಲ, ದೃಢ ಮನಸ್ಸು ಇರಬೇಕು. ಆಗ ಮಾತ್ರ ಸಾಧನೆಯ ಕಡೆಗೆ ಸಾಗಬಹುದು" ಎಂದರು.
ಈ ಬಾರಿ ಪುರುಷರ ವಿಭಾಗದಲ್ಲಿ ಉಜಿರೆಯ ಎಸ್.ಡಿ.ಎಮ್ ಕಾಲೇಜಿನ ಪುರುಷೋತ್ತಮ್ ಅವರಿಗೆ ಬೆಸ್ಟ್ ಲಿಫ್ಟರ್ ಪ್ರಶಸ್ತಿ ಲಭಿಸಿತು. ಮಹಿಳೆಯರ ವಿಭಾಗದಲ್ಲಿ ಮೂಡುಬಿದಿರೆಯ ಆಳ್ವಾಸ್ ಕಾಲೇಜಿನ ಥುರಾಮ್ ಪ್ರಿಯದರ್ಶಿನಿಗೆ ಲಭಿಸಿತು.
ಈ ಬಾರಿ ಸ್ಪರ್ಧೆಯಲ್ಲಿ ವಿಜೇತರಾದವರ ಜೊತೆಗೆ ಅನೇಕ ದಾಖಲೆಗಳು ವೈಟ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ನಡೆದಿವೆ. ಹಿಂದಿನ ಎಲ್ಲಾ ದಾಖಲೆಗಳನ್ನು ಮೀರಿಸಿ, ಈ ಬಾರಿ ವೈಟ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ಮಹಿಳೆಯರ 45 ಕೆಜಿ ವಿಭಾಗದಲ್ಲಿ ಕಾರ್ಕಳ ಶ್ರೀ ವೆಂಕಟರಮಣ ಮಹಿಳಾ ಕಾಲೇಜಿನ ಚೈತ್ರಾ 33 ಕೆಜಿ ಸ್ನ್ಯಾಚ್ ವಿಭಾಗದಲ್ಲಿ ದಾಖಲೆ, 38 ಕೆಜಿಯ ಕ್ಲೀನ್ ಆಂಡ್ ಜರ್ಕ್ ವಿಭಾಗದಲ್ಲಿ ದಾಖಲೆ, ಒಟ್ಟಾರೆಯಾಗಿ 71 ಕೆಜಿ ಭಾರ ಎತ್ತುವ ಮೂಲಕ ಮೂರರಲ್ಲೂ ಹೊಸ ದಾಖಲೆ ಬರೆದಿದ್ದಾರೆ.
ಮೂಡುಬಿದಿರೆ ಆಳ್ವಾಸ್ ಕಾಲೇಜಿನ ಥುರಾಮ್ ಪ್ರಿಯದರ್ಶಿನಿ 49 ಕೆಜಿ ವಿಭಾಗದ ಸ್ನ್ಯಾಚ್ ವಿಭಾಗದಲ್ಲಿ 71 ಕೆಜಿ ಭಾರ ಎತ್ತುವ ಮೂಲಕ ದಾಖಲೆ ಬರೆದಿದ್ದಾರೆ.
ಉಜಿರೆ ಎಸ್.ಡಿ.ಎಂ ಕಾಲೇಜಿನ ಸಿಂಧು ಜಿ.ಹೆಗ್ಗಡೆ 55 ಕೆಜಿ ವಿಭಾಗದ 79 ಕೆಜಿ ಕ್ಲೀನ್ ಆಂಡ್ ಜರ್ಕ್ ವಿಭಾಗದಲ್ಲಿ ಭಾರ ಎತ್ತಿ ದಾಖಲೆ ಮಾಡಿ, ಎರಡು ವಿಭಾಗದಲ್ಲಿ 141 ಕೆಜಿ ಭಾರ ಎತ್ತುವ ಮೂಲಕ ಹೊಸ ದಾಖಲೆ ಮಾಡಿದ್ದಾರೆ. ಇದೇ ಕಾಲೇಜಿನ ಲಕ್ಷ್ಮೀ ಬಿ 59 ಕೆಜಿ ವಿಭಾಗದಲ್ಲಿ ಕ್ಲೀನ್ ಆಂಡ್ ಜರ್ಕ್ ವಿಭಾದ 88 ಕೆಜಿ ಭಾರ ಎತ್ತುವ ಮೂಲಕ ದಾಖಲೆ ಮಾಡಿ, ಎರಡೂ ವಿಭಾದಲ್ಲಿ 154 ಕೆಜಿ ಎತ್ತಿ ಹೊಸ ದಾಖಲೆ ಮಾಡಿದ್ದಾರೆ. ಈ ಕಾಲೇಜಿನ ಇನ್ನೋರ್ವ ವಿಧ್ಯಾರ್ಥಿ ಶ್ರಾವ್ಯ ಶ್ರೀ ಜೆ.ಆರ್ 64 ಕೆಜಿ ವಿಭಾಗದ, ಸ್ನ್ಯಾಚ್ ವಿಭಾಗದಲ್ಲಿ 66 ಕೆಜಿ ಎತ್ತಿ ದಾಖಲೆ ಮಾಡಿ, ಎರಡೂ ವಿಭಾಗದಲ್ಲಿ 149 ಕೆಜಿ ಎತ್ತಿ ದಾಖಲೆಯನ್ನು ಸೃಷ್ಟಿಸಿದ್ದಾರೆ.
ಮೂಡುಬಿದಿರೆ ಆಳ್ವಾಸ್ ಕಾಲೇಜಿನ ಯಶಸ್ವಿನಿ.ವಿ. ಭಂಡಾರಿ 76 ಕೆಜಿ ವಿಭಾಗ ಮೂರೂ ವಿಭಾಗದಲ್ಲಿ 63 ಕೆಜಿ ಸ್ನ್ಯಾಚ್, 80 ಕೆಜಿ ಕ್ಲೀನ್ ಆಂಡ್ ಜರ್ಕ್, ಎರಡೂ ವಿಭಾದಲ್ಲಿ ಒಟ್ಟು 143 ಕೆಜಿ ದಾಖಲೆ ಮಾಡಿದ್ದಾರೆ. ಇದೇ ಕಾಲೇಜಿನ ಅನುಷ ಎಸ್.ಪಿ 81 ಕೆಜಿ ವಿಭಾಗದ 70 ಕೆಜಿ ಸ್ನ್ಯಾಚ್ನ ದಾಖಲೆ ಮಾಡಿದ್ದಾರೆ ಹಾಗೂ ಉಷ ಎಸ್,ಆರ್ 87 ಕೆಜಿ ವಿಭಾಗದಲ್ಲಿ 67 ಕೆಜಿ ಸ್ನ್ಯಾಚ್, 90 ಕೆಜಿ ಕ್ಲೀನ್ ಆಂಡ್ ಜರ್ಕ್, ಒಟ್ಟು ಮೂರು ವಿಭಾಗದಲ್ಲಿಯೂ 157 ಕೆಜಿ ಎತ್ತಿ ದಾಖಲೆ ಮಾಡಿದ್ದಾರೆ.
ಪುರುಷರ ವಿಭಾಗದ ಭಾರ ಎತ್ತುವ ಸ್ಪರ್ಧೆಯಲ್ಲಿ ಮೂಡುಬಿದಿರೆ ಆಳ್ವಾಸ್ ಕಾಲೇಜಿನ ನಾಗರಾಜ್ 55 ಕೆಜಿ ವಿಭಾಗದಲ್ಲಿ ಸ್ನ್ಯಾಚ್ ವಿಭಾಗದ 95 ಕೆಜಿ ಹಾಗೂ ಕ್ಲೀನ್ ಆಂಡ್ ಜರ್ಕ್ ವಿಭಾಗದ 112 ಕೆಜಿ ಒಟ್ಟಾರೆಯಾಗಿ 207 ಕೆಜಿ ಭಾರ ಎತ್ತುವ ಮೂಲಕ ಮೂರರಲ್ಲಿ ದಾಖಲೆ ಸೃಷ್ಟಿಸಿದ್ದಾರೆ.
ಉಜಿರೆ ಎಸ್.ಡಿ.ಎಸ್ ಕಾಲೇಜಿನ ಪುರುಷೋತ್ತಮ್ 61 ಕೆಜಿ ವಿ. ಮೂರರಲ್ಲಿಯೂ 111 ಕೆಜಿ ಸ್ನ್ಯಾಚ್, 141 ಕೆಜಿ ಕ್ಲೀನ್ ಆಂಡ್ ಜರ್ಕ್, ಒಟ್ಟಾರೆಯಾಗಿ 252 ಕೆಜಿ ಭಾರ ಎತ್ತಿ ಹಿಂದಿನ ದಾಖಲೆಯನ್ನು ಮುರಿದಿದ್ದಾರೆ. ಇದೇ ಕಾಲೇಜಿನ ರಜತ್ ರೈ 73 ಕೆಜಿ ವಿಭಾದಲ್ಲಿ 112 ಜಿ ಸ್ನ್ಯಾಚ್, 140 ಕೆಜಿ ಕ್ಲೀನ್ ಆಂಡ್ ಜರ್ಕ್, ಒಟ್ಟಾರೆಯಾಗಿ 252 ಕೆಜಿ ಎತ್ತಿ ಮೂರು ವಿಭಾಗದಲ್ಲೂ ದಾಖಲೆ ಮಾಡಿದ್ದಾರೆ. ಹಾಗೂ ಶಿವಪ್ರಕಾಶ್ 89 ಕೆಜಿ ವಿಭಾಗದಲ್ಲಿ 130 ಕೆಜಿ ಸ್ನ್ಯಾಚ್, 170 ಕೆಜಿ ಕ್ಲೀನ್ ಆಂಡ್ ಜರ್ಕ್, ಒಟ್ಟಾರೆ 300ಕೆಜಿ ಭಾರ ಎತ್ತಿ ಮೂರು ವಿಭಾಗದಲ್ಲಿ ಸಾಧನೆ ಮಾಡಿದ್ದಾರೆ.
ಮೂಡುಬಿದಿರೆ ಆಳ್ವಾಸ್ ಕಾಲೇಜಿನ ಪ್ರತ್ಯುಶ್ 102 ಕೆಜಿ ವಿಭಾಗದಲ್ಲಿ 100ಕೆಜಿ ಸ್ನ್ಯಾಚ್. ವಿಭಾಗದಲ್ಲಿ ವಿಶೇಷ ದಾಖಲೆ ಮಾಡಿದ್ದಾರೆ.
ವಿಶ್ವವಿದ್ಯಾಲಯದ ವ್ಯಾಪ್ತಿಯ 13 ಕಾಲೇಜುಗಳಿಂದ 170ಕ್ಕೂ ಅಧಿಕ ಯುವಕ ಯುವತಿಯರು ಸ್ಪರ್ಧೆಯಲ್ಲಿ ಭಾಗವಹಿಸಿದ್ದಾರೆ.
ಮಂಗಳೂರು ವಿ.ವಿ ಕ್ರೀಡಾ ಸಹಾಯಕ ನಿರ್ದೇಶಕ ಹರಿದಾಸ್ ರೈ, ಎಸ್.ಡಿ.ಎಮ್ ಕ್ರೀಡಾ ಮಂಡಳಿಯ ಕಾರ್ಯದರ್ಶಿ ರಮೇಶ್ ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಧರ್ಮೇಂದ್ರ ನಿರೂಪಿಸಿ, ವಂದಿಸಿದರು.