ಮುಂಬೈ, ಮಾ 06 (DaijiworldNews/SM): ಚೊಚ್ಚಲ ಬಾರಿಗೆ ಮಹಿಳಾ ಕ್ರಿಕೆಟ್ ತಂಡ ಐಸಿಸಿ ಟಿ-೨೦ ವಿಶ್ವಕಪ್ ನಲ್ಲಿ ಫೈನಲ್ ಪ್ರವೇಶಿಸಿದೆ. ಈ ತಂಡಕ್ಕೆ ಎಲ್ಲೆಡೆಯಿಂದ ಅಭಿನಂದನೆಯ ಮಹಾಪೂರವೇ ಕೇಳಿಬರುತ್ತಿದೆ. ಇದೀಗ ಕ್ರಿಕೆಟ್ ದಂತ ಕಥೆ ಸಚಿನ್ ತೆಂಡೂಲ್ಕರ್ ಅವರು ಟಿ-20 ಮಹಿಳಾ ವಿಶ್ವಕಪ್ ಟೂರ್ನಿಯಲ್ಲಿ ಫೈನಲ್ ಗೆ ಅರ್ಹತೆ ಪಡೆದ ಹರ್ಮನ್ ಪ್ರೀತ್ ಬಳಗವನ್ನು ಅಭಿನಂದಿಸಿದ್ದಾರೆ. ಹಾಗೂ ಫೈನಲ್ ಪಂದ್ಯದಲ್ಲಿ ಸ್ಥಿರ ಆಟ ಪ್ರದರ್ಶಿಸುವ ಮೂಲಕ ವಿಶ್ವಕಪ್ ಗೆದ್ದುಬನ್ನಿ ಎಂದು ಹಾರೈಸಿದ್ದಾರೆ.
ಫೈನಲ್ ಪಂದ್ಯದಲ್ಲಿ “ನಿಮ್ಮ ನೈಜ ಆಟವಾಡಿ ಹಾಗೂ ಆಟವನ್ನು ಆನಂದಿಸಿ. ವನಿತೆಯರು ನೀಡಿದ ಪ್ರದರ್ಶನ ಉತ್ತಮವಾದುದು. ಪ್ರಶಸ್ತಿ ಭಾರತಕ್ಕೆ ಬಂದರೆ ಖುಷಿ ಪಡುತ್ತೇವೆ ಎಂದು ತಿಳಿಸಿದ್ದಾರೆ. ಫೈನಲ್ ಪಂದ್ಯದಲ್ಲಿ ಯಾವುದೇ ಒತ್ತಡಕ್ಕೆ ಒಳಗಾಗದಿರಿ. ಯಾವುದೇ ಬೇರೆ ವಿಚಾರಗಳತ್ತ ಗಮನ ಹರಿಸದೆ, ಗುಣಾತ್ಮಕ ವಿಚಾರಗಳತ್ತ ಗಮನ ಹರಿಸಿ ಎಂದು ಸಚಿನ್ ತೆಂಡುಲ್ಕರ್ ತಿಳಿಸಿದ್ದಾರೆ.
ಭಾರತ ಮಹಿಳಾ ತಂಡ ಮಾ.8 ರಂದು ಆಸ್ಟ್ರೇಲಿಯಾ ವಿರುದ್ಧ ಫೈನಲ್ ಪಂದ್ಯದಲ್ಲಿ ಮುಖಾಮುಖಿಯಾಗಲಿದೆ. ಭಾರತ, ಇಂಗ್ಲೆಂಡ್ ನಡುವಿನ ಪಂದ್ಯ ಮಳೆಗೆ ಆಹುತಿಯಾಗಿದ್ದರಿಂದ, ಭಾರತ ಲೀಗ್ ಹಂತದಲ್ಲಿ ಅತ್ಯಧಿಕ ಅಂಕಗಳನ್ನು ಹೊಂದಿದ್ದ ಕಾರಣದಿಂದಾಗಿ ಪ್ರಶಸ್ತು ಸುತ್ತಿಗೆ ಎಂಟ್ರಿ ಪಡೆದುಕೊಂಡಿತು. ಇನ್ನೊಂದೆಡೆ ಸೆಮಿಫೈನಲ್ ನಲ್ಲಿ ದಕ್ಷಿಣ ಆಫ್ರಿಕಾವನ್ನು ಮಣಿಸಿರುವ ಆಸೀಸ್ ಪ್ರಶಸ್ತಿ ಸುತ್ತು ಪ್ರವೇಶಿಸಿತ್ತು.