ಪರ್ತ್, ಫೆ 25 (DaijiworldNews/SM): ಐಸಿಸಿ ಮಹಿಳಾ ಟಿ-20ಯಲ್ಲಿ ಭಾರತೀಯ ವನಿತೆಯರ ಗೆಲುವಿನ ನಾಗಾಲೋಟ ಮುಂದುವರೆದಿದೆ. ಎರಡನೇ ಪಂದ್ಯದಲ್ಲಿ ಬಾಂಗ್ಲಾದೇಶವನ್ನು ಮಣಿಸುವ ಮೂಲಕ ಆಡಿದ ಎರಡೂ ಪಂದ್ಯದಲ್ಲಿ ಮೇಲುಗೈ ಸಾಧಿಸಿದೆ.
ಪರ್ತ್ ನಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಟೀಂ ಇಂಡಿಯಾ 6 ವಿಕೆಟ್ ನಷ್ಟಕ್ಕೆ 142 ರನ್ ಗಳ ಸಾಧರಣ ಮೊತ್ತ ಪೇರಿಸಿತು. ಭಾರತ ನೀಡಿದ ಸಾಧರಣ ಮೊತ್ತದ ಗುರಿ ಬೆನ್ನಟ್ಟಿದ ಬಾಂಗ್ಲಾ 20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 124 ರನ್ ಗಳಿಸುವ ಮೂಲಕ 18 ರನ್ ಗಳ ಅಂತರದ ಸೋಲನುಭವಿಸಿತು.
ಇನ್ನು ಮೊದಲು ಬ್ಯಾಟಿಂಗ್ ಮಾಡಿದ ಭಾರತೀಯರ ಪೈಕಿ ಆರಂಭಿಕ ಆಟಗಾರ್ತಿಯರಾದ ತನಿಯಾ ಭಾಟಿಯಾ ಕೇವಲ 2 ರನ್ ಗಳಿಸಲಷ್ಟೇ ಶಕ್ತರಾದರು. ಈ ವೇಳೆ ಭರ್ಜರಿ ಆಟ ಪ್ರದರ್ಶಿಸಿದ ಶಫಾಳಿ ವರ್ಮಾ 39 ರನ್ ಸಿಡಿಸಿದರು. ಹಾಗೂ ಪಂದ್ಯದಲ್ಲಿ ಅತ್ಯಧಿಕ ರನ್ ಗಳಿಸಿದ ಆಟಗಾರ್ತಿ ಎಣಿಸಿಕೊಂಡರು. ಇನ್ನು ತಾಳ್ಮೆಯ ಆಟವಾಡಿದ ಜೆಮಿಮಾ ರೊಡ್ರಿಗಸ್ 34 ರನ್ ಗಳನ್ನು ಸಿಡಿಸಿದರು. ಅಂತಿಮವಾಗಿ ಭಾರತ 20 ಓವರ್ ಗಳಲ್ಲಿ ಆರು ವಿಕೆಟ್ ಗಳ ನಷ್ಟಕ್ಕೆ 142 ರನ್ ಗಳಿಸಿತು.
ಇನ್ನು ಭಾರತದ ಸಾಧರಣ ಮೊತ್ತದ ಗುರಿ ಬೆನ್ನಟ್ಟಿದ ಬಾಂಗ್ಲಾ ತಂಡದ ಆರಂಭಿಕ ಆಟಗಾರ್ತಿ ಶಮಿಮಾ ಸುಲ್ತಾನ್ ನಿರೀಕ್ಷಿತ ಪ್ರದರ್ಶನ ನೀಡಲು ವಿಫಲರಾದರು. ಕೇವಲ ಮೂರು ರನ್ ಗಳಿಸಿ ನಿರ್ಗಮಿಸಿದರು. ಬಳಿಕ 30 ರನ್ ಗಳಿಸಿದ ಮುರ್ಶಿದಾ ತಂಡದ ಮೊತ್ತ ಹೆಚ್ಚಳಕ್ಕೆ ನೆರವಾದರು. ನಿಗರ್ ಸುಲ್ತಾನ್ 35 ರನ್ ಸಿಡಿಸಿದರು. ಅಂತಿಮವಾಗಿ 8 ವಿಕೆಟ್ ನಷ್ಟಕ್ಕೆ 124ರನ್ ಗಳಿಸಿ ಬಾಂಗ್ಲಾ ತಂಡ ಸೋಲೊಪ್ಪಿಕೊಂಡಿದೆ.
ಈ ಪಂದ್ಯದ ಗೆಲುವಿನ ಮೂಲಕ ಟೀಂ ಇಂಡಿಯಾದ ವನಿತೆಯರು ಅಜೇಯರಾಗಿ ಮುನ್ನುಗ್ಗುತ್ತಿದ್ದಾರೆ. ಮುಂದಿನ ಪಂದ್ಯ ಬಲಿಷ್ಟ ನ್ಯೂಜಿಲ್ಯಾಂಡ್ ತಂಡದ ವಿರುದ್ಧ ಗುರುವಾರದಂದು ನಡೆಯಲಿದೆ. ಈ ಪಂದ್ಯದಲ್ಲೂ ಗೆಲುವಿನ ನಗೆ ಚೆಲ್ಲಿದ್ದಲ್ಲಿ, ಟೀಂ ಇಂಡಿಯಾದ ಸೆಮಿಫೈನಲ್ ಹಾದಿ ಸುಗಮಗೊಳ್ಳಲಿದೆ.