ವೆಲ್ಲಿಂಗ್ಟನ್ ಫೆ.22 (DaijiworldNews/PY) : ಬೇಸಿನ್ ರಿಸರ್ವ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ನ್ಯೂಜಿಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಕಡಿಮೆ ಮೊತ್ತಕ್ಕೆ ಕುಸಿದಿದ್ದು, ಭಾರತೀಯ ಬ್ಯಾಟ್ಸ್ಮನ್ಗಳು ಕೇವಲ 165 ರನ್ಗೆ ಸರ್ವಪತನ ಕಂಡಿದೆ.
ಮೊದಲ ದಿನವೇ ಕೊಹ್ಲಿ ಪಡೆ ದಿನದಾಟದ ಅಂತ್ಯಕ್ಕೆ 55 ಓವರ್ನಲ್ಲಿ 5 ವಿಕೆಟ್ ನಷ್ಟಕ್ಕೆ 122 ರನ್ ಗಳಿಸಿತ್ತು. ಅಜಿಂಕ್ಯಾ ರಹಾನೆ(38) ಹಾಗೂ ರಿಷಭ್ ಪಂತ್(10) ಇಂದು ಎರಡನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದರು.
2ನೇ ದಿನದಾಟದ ಆರಂಭಿಸಿದ ಟೀಂ ಇಂಡಿಯಾ ಕನಿಷ್ಠ 200 ರನ್ಗಳ ಗಡಿಯೂ ದಾಟಲಿಲ್ಲ. 53 ಎಸೆತಗಳಲ್ಲಿ 19 ರನ್ ಗಳಿಸಿದ ಪಂತ್ ಮೊದಲನೇಯವರಾಗಿ ಪೆವಿಲಿಯನ್ನತ್ತ ಹೆಜ್ಜೆ ಹಾಕಿದರು.
ಆರ್. ಅಶ್ವಿನ್ ಬಂದ ಬೆನ್ನಲ್ಲೆ ಔಟ್ ಆಗಿ ಪೆವಿಲಿಯನ್ ಕಡೆ ನಡೆದರು. ರಹಾನೆ ಕೂಡ ಹೆಚ್ಚು ಹೊತ್ತು ಕ್ರೀಸ್ನಲ್ಲಿ ನಿಲ್ಲದೆ 138 ಎಸೆತಗಳಲ್ಲಿ 46 ರನ್ ಗಳಿಸಿ ಔಟಾದರು.
ಅಂತಿಮ ಹಂತದಲ್ಲಿ ಮೊಹಮ್ಮದ್ ಶಮಿ 20 ಎಸೆತಗಳಲ್ಲಿ 21 ರನ್ ಬಾರಿಸಿ ತಂಡದ ಮೊತ್ತವನ್ನು 150ರ ಗಡಿ ದಾಟಿಸಿದರು. ಭಾರತ 68.1 ಓವರ್ನಲ್ಲಿ 165 ರನ್ಗೆ ಆಲೌಟ್ ಆಯಿತು. ನ್ಯೂಜಿಲೆಂಡ್ ಪರ ಟಿಮ್ ಸೌಥೀ ಹಾಗೂ ಕೈಲ್ ಜೇಮಿಸನ್ ತಲಾ 4 ವಿಕೆಟ್ ಪಡೆದರು. ಟ್ರೆಂಟ್ ಬೌಲ್ಟ್ 1 ವಿಕೆಟ್ ಪಡೆದರು.
ನಂತರ ಮೊದಲ ಇನ್ನಿಂಗ್ಸ್ ಆರಂಭಿಸಿದ್ದ ನ್ಯೂಜಿಲ್ಯಾಂಡ್ 5 ವಿಕೆಟ್ ನಷ್ಟಕ್ಕೆ 216 ರನ್ ಪೇರಿಸಿತ್ತು. ಈ ವೇಳೆ ಮಂದ ಬೆಳಕಿನ ಹಿನ್ನೆಲೆಯಲ್ಲಿ ಪಂದ್ಯವನ್ನು ಸ್ಧಗಿತಗೊಳಿಸಲಾಯಿತು. ಸದ್ಯ ಕಿವೀಸ್ 51 ರನ್ ಮುನ್ನಡೆ ಸಾಧಿಸಿದೆ.