ಬೆಂಗಳೂರು, ಫೆ 14 (DaijiworldNews/SM): ರಣಜಿ ಟ್ರೋಫಿಯಲ್ಲಿ ಕರ್ನಾಟಕ ತಂಡ ತನ್ನ ಗೆಲುವಿನ ನಾಗಲೋಟವನ್ನು ಮುಂದುವರೆಸಿದೆ. ಆ ಮೂಲಕ ರಣಜಿಯಲ್ಲಿ ಕ್ವಾರ್ಟರ್ ಫೈನಲ್ಗೆ ಎಂಟ್ರಿ ಪಡೆದುಕೊಂಡಿದೆ.
ಕರ್ನಾಟಕ ತಂಡ 2019/20ನೇ ಸಾಲಿನ ರಣಜಿ ಟ್ರೋಫಿ ಎಲೈಟ್ ಎ ಮತ್ತು ಬಿ ಗುಂಪಿನ ಪಂದ್ಯದಲ್ಲಿ ಬರೋಡ ವಿರುದ್ಧ ಎಂಟು ವಿಕೆಟ್ ಗಳ ಭರ್ಜರಿ ಜಯ ಸಾಧಿಸಿದೆ. ಆ ಮೂಲಕ ಕ್ವಾರ್ಟರ್ ಫೈನಲ್ ಲೈನ್ ಕ್ಲೀಯರ್ ಮಾಡಿಕೊಂಡಿದೆ. ಪ್ರಸಿದ್ಧ ಕೃಷ್ಣ(45ಕ್ಕೆ 4) ಮಾರಕ ದಾಳಿ ಹಾಗೂ ನಾಯಕ ಕರುಣ್ ನಾಯರ್ (ಅಜೇಯ 71 ರನ್) ಅವರ ಜವಾಬ್ದಾರಿಯುತ ಬ್ಯಾಟಿಂಗ್ ನೆರವಿನಿಂದ ಈ ಸಾಧನೆ ಮಾಡಲು ಕರ್ನಾಟಕ ತಂಡ ಶಕ್ತವಾಗಿದೆ.
ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೇಸಿದ ಬರೋಡ ತಂಡ ಕರ್ನಾಟಕ ತಂಡಕ್ಕೆ ಗೆಲ್ಲಲು 150 ರನ್ ಗಳ ಸಾಮಾನ್ಯ ಗುರಿ ನೀಡಿತು. ಇದನ್ನು ಬೆನ್ನಟ್ಟಿದ ಕನ್ನಡಿಗರು 44.4 ಓವರ್ ಗಳಲ್ಲಿ ಎರಡು ವಿಕೆಟ್ ಕಳೆದುಕೊಂಡು 150 ರನ್ ಗಳಿಸಿ ಗೆಲುವಿನ ಕೇಕೆ ಹಾಕಿದರು.
ಇನ್ನು ಇದಕ್ಕೂ ಮುನ್ನ ಐದು ವಿಕೆಟ್ ಕಳೆದುಕೊಂಡು 208 ರನ್ಗಳಿಂದ ಮೂರನೇ ದಿನದಾಟ ದ್ವಿತೀಯ ಇನಿಂಗ್ಸ್ ಮುಂದುವರಿಸಿದ್ದ ಬರೋಡ ತಂಡ 89.5 ಓವರ್ಗಳಿಗೆ 296 ರನ್ಗಳಿಗೆ ತನ್ನೆಲ್ಲ ವಿಕೆಟ್ ಗಳನ್ನು ಕಳೆದುಕೊಂಡಿತು. ಆಮೂಲಕ ಕರ್ನಾಟಕಕ್ಕೆ 149 ರನ್ ಸಾಧಾರಣ ಗುರಿ ನೀಡಿತು.
ಮೊದಲ ಇನ್ನಿಂಗ್ಸ್ ನಲ್ಲಿ ಕರ್ನಾಟಕ ಬೌಲರ್ ಗಳ ಮುಂದೆ ಬರೋಡ ಹುಡುಗರ ಆಟ ನಡೆಯಲಿಲ್ಲ. ಕೇವಲ 85 ರನ್ಗಳಿಗೆ ಸರ್ವ ಪತನ ಕಂಡರು. ಆದರೆ, ದ್ವಿತೀಯ ಇನಿಂಗ್ಸ್ನಲ್ಲಿ ಕರ್ನಾಟಕ ಬೌಲರ್ಗಳ ಸವಾಲನ್ನು ಮೆಟ್ಟಿ ನಿಂತಿತು. ದ್ವಿತೀಯ ಇನಿಂಗ್ಸ್ನಲ್ಲಿ 296 ರನ್ ಗಳಿಸಿ ಕನ್ನಡಿಗರಿಗೆ ಸಾಧರಣ ಮೊತ್ತದ ಗುರಿ ನಿಗಧಿಗೊಳಿಸಿದರು.
ಇನ್ನು ಲೀಗ್ ಹಂತದ ಪಂದ್ಯಗಳಲ್ಲಿ ಕರ್ನಾಟಕ ನಾಲ್ಕು ಪಂದ್ಯಗಳಲ್ಲಿ ಗೆಲುವು ದಾಖಲಿಸಿಕೊಂಡಿದೆ. ಹಾಗೂ 31 ಅಂಕಗಳನ್ನು ತನ್ನ ಖಾತೆಯಲ್ಲಿ ಹೊಂದಿದ್ದು, ಅಂಕಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. ಇದೀಗ ಕ್ವಾರ್ಟರ್ ಫೈನಲ್ ಗೆ ಲಗ್ಗೆ ಇಟ್ಟಿದ್ದು, ಜಮ್ಮು ಕಾಶ್ಮೀರದ ತಂಡದೊಂದಿಗೆ ಕರ್ನಾಟಕದ ತಂಡ ಹೋರಾಡಲಿದೆ. ಈ ಪಂದ್ಯಕ್ಕೆ ಅನುಭವಿ ಆಟಗಾರ ಕೆ.ಎಲ್. ರಾಹುಲ್ ಹಾಗೂ ಮನೀಶ್ ಪಾಂಡೆ ಲಭ್ಯವಾಗುವ ಸಾಧ್ಯತೆ ಇದೆ.