ಮೌಂಟ್ ಮಾಂಗನೂಯಿ ಜ 12 (DaijiworldNews/SM): ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಯ ಮೂರನೇ ಪಂದ್ಯದಲ್ಲಿ ಆಡಿದ ಕೆ.ಎಲ್.ರಾಹುಲ್ ಮತ್ತು ಮನೀಷ್ ಪಾಂಡೆ ಬ್ಯಾಟಿಂಗ್ ವೇಳೆ ಕನ್ನಡದಲ್ಲೇ ಸಂವಹನ ನಡೆಸಿ ಕನ್ನಡಿಗರ ಮನಗೆದ್ದಿದ್ದಾರೆ.
ರಾಹುಲ್ ಮತ್ತು ಪಾಂಡೆ ಆರನೇ ವಿಕೆಟ್ ಜೊತೆಯಾಟದಲ್ಲಿ 107 ರನ್ ಕೂಡಿಸಿದ್ದರು. ಈ ಜೊತೆಯಾಟದ ವೇಳೆ ಅವರು ಕನ್ನಡದಲ್ಲಿ ಮಾತನಾಡಿರುವುದು ಸ್ಟಂಪ್ಗೆ ಅಳವಡಿಸಿರುವ ಮೈಕ್ನಲ್ಲಿ ದಾಖಲಾಗಿದೆ. ನ್ಯೂಜಿಲೆಂಡ್ನ ಪ್ರಮುಖ ಸ್ಪಿನ್ನರ್ ಮಿಚೇಲ್ ಸ್ಯಾಂಟನರ್ ಹಾಕಿದ 41ನೇ ಓವರ್ನ ಮೂರನೇ ಎಸೆತವನ್ನು ರಾಹುಲ್ ಕಟ್ ಮಾಡಿದರು. ಈ ವೇಳೆ ಅವರ ಬ್ಯಾಟಿಗೆ ತಾಗಿದ ಚೆಂಡು ಕೀಪರ್ ಬಳಿಯಿಂದ ಬೌಂಡರಿ ಗೆರೆಯತ್ತ ಸಾಗಿತು. ಫೀಲ್ಡರ್ ಅದನ್ನು ತಡೆಯುವ ಮುನ್ನ ಇಬ್ಬರೂ ಮೂರು ರನ್ ಕಬಳಿಸಿದರು. ಈ ನಡುವೆ ಬಾ..ಬಾ.., ಹೌದು, ಓಡು ಇತ್ಯಾದಿ ಮಾತುಗಳು ಕೇಳಿಬಂದವು. ಹ್ಯಾಮಿಶ್ ಬೆನೆಟ್ ಅವರ 45ನೇ ಓವರ್ ನಡುವೆಯೂ ಕನ್ನಡ ಕೇಳಿಬಂತು. ದೂರದ ನ್ಯೂಜಿಲೆಂಡ್ನಲ್ಲಿ ಆಡುತ್ತಿರುವ ರಾಹುಲ್ ಮತ್ತು ಪಾಂಡೆ ಕನ್ನಡದಲ್ಲಿ ಮಾತನಾಡಿರುವುದಕ್ಕೆ ನೆಟ್ಟಿಗರು ಮೆಚ್ಚುಗೆಯ ಮಳೆ ಸುರಿಸಿದ್ದಾರೆ.