ಮೌಂಟ್ಮೌಂಗಾನುಯಿ, ಫೆ 11 (DaijiworldNews/SM): ಮೂರನೇ ಹಾಗೂ ಅಂತಿಮ ಏಕದಿನ ಕ್ರಿಕೆಟ್ ಪಂದ್ಯದಲ್ಲಿ ಟೀಂ ಇಂಡಿಯಾವನ್ನು ಸೋಲಿಸುವ ಮೂಲಕ ನ್ಯೂಜಿಲ್ಯಾಂಡ್ ತಂಡ ಟಿ-20 ಸರಣಿ ಸೋಲಿನ ಸೇಡುತೀರಿಸಿಕೊಂಡಿದ್ದು, ಸರಣಿಯನ್ನು ವೈಟ್ ವಾಶ್ ಮಾಡಿಕೊಂಡಿದೆ.
ಇಂದು ನಡೆದ ಮೂರನೇ ಏಕದಿನ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಟೀಂ ಇಂಡಿಯಾ ಆರಂಭದಲ್ಲೇ ಮುಗ್ಗರಿಸಿತು. ಪೃಥ್ವಿ ಶಾ 40 ರನ್ ಗಳಿಸಿದರೆ, ಮಾಯಾಂಕ್ ಅಗರ್ವಾಲ್ ಮತ್ತೊಮ್ಮೆ ವಿಫಲರಾದರು. ನಾಯಕ ವಿರಾಟ್ ಕೊಹ್ಲಿ ಬ್ಯಾಟ್ ನಿಂದಲೂ ಕೂಡ ರನ್ ಹೊಳೆ ಹರಿಯಲಿಲ್ಲ. ಶ್ರೇಯಸ್ ಐಯ್ಯರ್ 62, ಮನೀಶ್ ಪಾಂಡೆ 42 ರನ್ ಗಳಿಸಿದರೆ, ಲೋಕೇಶ್ ರಾಹುಲ್(112) ಶತಕ ಸಿಡಿಸಿ ಸಂಭ್ರಮಿಸಿದರು.
ಅಂತಿಮವಾಗಿ ಟೀಂ ಇಂಡಿಯಾ ಐವತ್ತು ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 296 ರನ್ ಗಳಿಸಿತು. ಹಾಗೂ ನ್ಯೂಜಿಲ್ಯಾಂಡ್ ತಂಡಕ್ಕೆ ಗೆಲ್ಲಲು 297 ರನ್ ಗಳ ಗುರಿ ನೀಡಿತು.
ಇನ್ನು ಭಾರತ ನೀಡಿದ ಸಾಧಾರಣ ಮೊತ್ತದ ಗುರಿ ಬೆನ್ನತ್ತಿದ ನ್ಯೂಜಿಲ್ಯಾಂಡ್ ತಂಡಕ್ಕೆ ಉತ್ತಮ ಆರಂಭ ಸಿಕ್ಕಿತು. ಆರಂಭಿಕರಾದ ಮಾರ್ಟಿನ್ ಗುಪ್ಟಿಲ್ 66, ಹೆನ್ರಿ ನಿಕೋಲಸ್ 80 ರನ್ ಗಳಿಸಿ ಉತ್ತಮ ಅಡಿಪಾಯ ಹಾಕಿದರು. ಅಂತಿಮವಾಗಿ ಕಾಲಿನ್ 58 ರನ್ ಗಳಿಸಿ ಅಜೇಯರಾಗುಳಿದು ತಂಡವನ್ನು ಗೆಲುವಿನ ದಡ ಸೇರಿಸಿದರು. ನ್ಯೂಜಿಲ್ಯಾಂಡ್ 47.1 ಓವರ್ ನಲ್ಲಿ 5 ವಿಕೆಟ್ ನಷ್ಟಕ್ಕೆ 300 ರನ್ ಸಿಡಿಸಿ ಗೆಲುವಿನ ನಗೆ ಚೆಲ್ಲಿತು.