ನವದೆಹಲಿ, ಫೆ.06 (Daijiworld News/PY) : ಮುಂಬೈನ ಜನನಿಬಿಡ ಪ್ರದೇಶವೊಂದರಲ್ಲಿ ವಾಸಿಸುತ್ತಿದ್ದ ಯಶಸ್ವಿ ಜೈಸ್ವಾಲ್ ಇಂದು ಭಾರತೀಯ ಕ್ರಿಕೆಟ್ನಲ್ಲಿ ವೇಗವಾಗಿ ಬೆಳೆಯುತ್ತಿದ್ದಾರೆ. ತನ್ನ 18ನೇ ವಯಸ್ಸಿನಲ್ಲಿ ದೇಶೀಯ ಕ್ರಿಕೆಟ್ನಲ್ಲಿ ದ್ವಿಶತಕ ಬಾರಿಸಿ ಹಾಗೂ ಅಂತರಾಷ್ಟ್ರೀಯ ಕ್ರಿಕೆಟ್ನಲ್ಲಿ ಶತಕ ಸಾಧನೆ ಗೈದಿದ್ದಾರೆ.
ಭಾರತದ ಆರಂಭಿಕ ಬ್ಯಾಟ್ಸ್ಮನ್ ಯಶಸ್ವಿ ಜೈಸ್ವಾಲ್ 105 ರನ್ ಗಳಿಸಿದ್ದು,113 ಎಸೆತಗಳಲ್ಲಿ 8 ಬೌಂಡರಿ, 4 ಸಿಕ್ಸ್ ಹಾಗೂ ದಿವ್ಯಾಂಶ್ ಸಕ್ಸೇನಾ 59 ರನ್ ಕಲೆಹಾಕಿದ್ದು, 99 ಎಸೆತಗಳಲ್ಲಿ, 6 ಬೌಂಡರಿ ಬಾರಿಸಿ ತಂಡಕ್ಕೆ ಗೆಲುವು ತಂದುಕೊಟ್ಟರು. ಈ ಮೂಲಕ 7ನೇ ಬಾರಿ ಭಾರತ ಫೈನಲ್ ಪ್ರವೇಶಿಸಿದೆ. 3 ಓವರ್ ಬೌಲಿಂಗ್ ಮಾಡಿದ ಯಶಸ್ವಿ ಜೈಸ್ವಾಲ್ ಕೇವಲ 11 ರನ್ ನೀಡಿ, ಒಂದು ವಿಕೆಟ್ ಪಡೆದು ತಂಡಕ್ಕೆ ಆಸರೆಯಾಗಿದ್ದರು.
ಕ್ರಿಕೆಟಿಗನಾಗುವ ಮೂಲಕ ದೇಶಕ್ಕಾಗಿ ಆಡುವ ಕನಸು ಹೊತ್ತಿದ್ದ ಯಶಸ್ವಿ ಅವರಿಗೆ ಮುಂದೆ ಅನೇಕ ಸವಾಲುಗಳು ಎದುರಾದವು. ಆದರೆ ಎಲ್ಲಾ ಕಠಿಣ ಸವಾಲುಗಳನ್ನು ಎದುರಿಸಿದ ಯಶಸ್ವಿ ಈಗ ಉತ್ತಮ ಕ್ರಿಕೆಟ್ ಆಟಗಾರರಾಗಿದ್ದಾರೆ.
ರಸ್ತೆ ಬದಿ ಪಾನಿಪುರಿ ಮಾರುತ್ತಾ, ಅದೆಷ್ಟೋ ರಾತ್ರಿ ಹಸಿದ ಹೊಟ್ಟೆಯಲ್ಲಿ ಆಝಾದ್ ಮೈದಾನದ ಡೇರೆಯಲ್ಲಿ ಕಳೆದ ಯಶಸ್ವಿ ಜೈಸ್ವಾಲ್ ಅವರ ವೃತ್ತಿ ಜೀವನ ಎಲ್ಲರಿಗೂ ಮಾದರಿಯಾಗಿದೆ.
ಜೈಸ್ವಾಲ್ನ ಬಗ್ಗೆ ಮಾತನಾಡಿದ ಪಾಕಿಸ್ತಾನದ ವೇಗದ ಬೌಲರ್ ಶೋಯೆಬ್ ಅಖ್ತರ್ ಅವರು, ಜೈಸ್ವಾಲ್ಗೆ ಆಟದ ಬಗ್ಗೆ ಉತ್ಸಾಹ, ಆಸಕ್ತಿಯಿದ್ದು ಹಿರಿಯರ ತಂಡವನ್ನು ಪ್ರತಿನಿಧಿಸುತ್ತಾರೆ. ನನ್ನ ಮಾತು ಸತ್ಯ. ಜೈಸ್ವಾಲ್ನ ಇತಿಹಾಸವನ್ನು ನೋಡಿ ಪಾಕಿಸ್ತಾನಿ ಆಟಗಾರರು ಕಲಿಯಬೇಕಾಗಿದೆ. ಜೈಸ್ವಾಲ್ ಸಾಧನೆಯ ಹಿಂದೆ ಹೋಗುತ್ತಿದ್ದಾರೆ ಆದರೆ ಹಣ ಜೈಸ್ವಾಲ್ ಹಿಂದೆ ಹೋಗುತ್ತಿದೆ ಎಂದು ಹೇಳಿದ್ದರು.
ಕಳೆದ ಡಿಸೆಂಬರ್ನಲ್ಲಿ ಕ್ರಿಕೆಟ್ ಬಗ್ಗೆ ಬಿಸಿಸಿಐನೊಂದಿಗೆ ಮಾತನಾಡಿದ ಯಶಸ್ವಿ, ನನಗೆ ಕ್ರಿಕೆಟ್ ಎಂದರೆ ತುಂಬಾ ಪ್ರೀತಿ. ಕ್ರಿಕೆಟ್ ಆಡುವುದೆಂದರೆ ನನಗೆ ತುಂಬಾ ಸಂತೋಷ. ನಾನು ಸಚಿನ್ ಸರ್ ಅವರ ಬ್ಯಾಟಿಂಗ್ ನೋಡುತ್ತಿದೆ. ಹಾಗಾಗಿ ನಾನು ಮುಂಬೈ ತಂಡವನ್ನು ಪ್ರತಿನಿಧಿಸಲು ಬಯಸುತ್ತೇನೆ ಎಂದು ಹೇಳಿದ್ದರು.
ನಾನು ತಂದೆಯೊಂದಿಗೆ ಮುಂಬೈಗೆ ಬಂದಾಗ ಆಝಾದ್ ಮೈದಾನಕ್ಕೆ ಭೇಟಿ ನೀಡುತ್ತಿದ್ದೆ. ಕ್ರಿಕೆಟ್ ಆಡಲು ಇಷ್ಟಪಡುತ್ತಿದ್ದೆ. ನಾನು ಅಭ್ಯಾಸ ಮಾಡಲು ಪ್ರಾರಂಭಿಸಿದಾಗ ನನ್ನ ತಂದೆ ಮನೆಗೆ ಹೋಗೋಣ ಎಂದು ಕರೆದುಕೊಂಡು ಹೋಗುತ್ತಿದ್ದರು. ನಾನು ಇಲ್ಲಿಯೇ ಉಳಿದು ಮುಂಬೈ ಪರ ಆಡುತ್ತೇನೆ ಎಂದು ಹೇಳುತ್ತಿದ್ದೆ. ಇದಾದ ಬಳಿಕ ನಾನು ಕ್ರಿಕೆಟ್ನ ವಸ್ತುಗಳನ್ನು ತೆಗೆದುಕೊಂಡು ಆಝಾದ್ ಮೈದಾನಕ್ಕೆ ಬಂದೆ. ಆ ಸಮಯದಲ್ಲಿ ಒಂದು ಪಂದ್ಯ ನಡೆಯುತ್ತಿದೆ ಮತ್ತು ನಾನು ಆ ಪಂದ್ಯವನ್ನು ನೋಡಿದರೆ ನನಗೆ ಉಳಿಯಲು ಒಂದು ಟೆಂಟ್ ಸಿಗುತ್ತದೆ ಎಂದು ಪಪ್ಪು ಸರ್ ಹೇಳಿದ್ದರು. ನಾನು ಆ ಪಂದ್ಯವನ್ನು ನೋಡಿ ಚೆನ್ನಾಗಿದೆ ಎಂದು ಹೇಳಿದ್ದೆ. ಹೀಗಾಗಿ ನಾನು ಡೇರೆಯಲ್ಲಿ ವಾಸಿಸಬೇಕಾಯಿತು ಎಂದು ತಿಳಿಸಿದ್ದಾರೆ.
ಆ ಸಮಯದಲ್ಲಿ ನನ್ನ ಕುಟುಂಬದಿಂದ ನನಗೆ ಹಣದ ನೆರವು ಸಿಗುತ್ತಿರಲಿಲ್ಲ. ಹಾಗಾಗಿ ನಾನು ಪಾನಿಪುರಿ ಮಾರಿ ಹಣ ಸಂಪಾದಿಸುತ್ತಿದ್ದೆ. ನನ್ನೊಂದಿಗೆ ಆಟವಾಡುತ್ತಿದ್ದ ಆಟಗಾರರು ನಾನು ಕೆಲಸ ಮಾಡುತ್ತಿದ್ದ ಅಂಗಡಿಗೆ ಬರುತ್ತಿದ್ದ ಕಾರಣ ನನಗೆ ಮುಜುಗರವಾಗುತ್ತಿತ್ತು. ಬೆಳಗ್ಗೆ ಶತಕ ಬಾರಿಸಿ, ಸಂಜೆ ಪಾನಿಪುರಿ ಮಾರಾಟ ಮಾಡುತ್ತೇನೆ ಎಂದು ನನ್ನ ಬಗ್ಗೆ ನಾನೇ ಕೆಟ್ಟದಾಗಿ ಭಾವಿಸುತ್ತಿದ್ದೆ. ಆದರೆ ಇದು ಸಣ್ಣ ಕೆಲಸವಾಗಿದ್ದರೂ ನನಗೆ ಮುಖ್ಯವಾಗಿತ್ತು, ಇದರೊಂದಿಗೆ ನನ್ನ ಗಮನ ಮಾತ್ರ ಕ್ರಿಕೆಟ್ ಮೇಲಿತ್ತು ಎಂದು ಜೈಸ್ವಾನ್ ಹೇಳಿದ್ದಾರೆ.
ಈ ಸಂದರ್ಭ ಜ್ವಾಲಾ ಸಿಂಗ್ ಎಂಬ ತರಬೇತಿದಾರರು ನನ್ನನ್ನು ಗುರುತಿಸಿ ಅವರ ತಂಡದೊಂದಿಗೆ ಆಟವಾಡಲು ನಿರ್ಧರಿಸಿದ್ದರು. ನನ್ನ ಬಳಿ ಊಟಕ್ಕೂ ಹಣವಿರಲಿಲ್ಲ ಹಾಗೂ ಉಳಿದುಕೊಳ್ಳಲು ಜಾಗವಿರಲಿಲ್ಲ. ಈ ವೇಳೆ ಜ್ವಾಲಾ ಸಿಂಗ್ ಅವರು ಕೇವಲ ಕ್ರಿಕೆಟ್ನತ್ತ ಮಾತ್ರ ಗಮನ ಹರಿಸು, ಉಳಿದಂತೆ ವ್ಯವಸ್ಥೆಗಳನ್ನು ನಾನು ನೋಡಿಕೊಳ್ಳುವುದಾಗಿ ಹೇಳಿದ್ದರು. 2019ರ ವಿಜಯ್ ಟ್ರೋಫಿ ಪಂದ್ಯವನ್ನು ಆಡಲು ನಾನು ಆಯ್ಕೆಯಾಗಿದ್ದು, ವಿಜಯ್ ಟ್ರೋಫಿ ಪಂದ್ಯಾಟದಲ್ಲಿ ನಾನು ದ್ವಿಶತಕ ಗಳಿಸಿ ಅತ್ಯಂತ ಕಿರಿಯ ಎಂಬ ದಾಖಲೆಯನ್ನು ಸೃಷ್ಟಿಸಿದೆ ಎಂದು ತಿಳಿಸಿದರು.
ವಿಜಯ್ ಹಜಾರೆ ಟ್ರೋಫಿ ಹಣಾಹಣಿಯಲ್ಲಿ ಜೈಸ್ವಾಲ್ ಜಾರ್ಖಂಡ್ ವಿರುದ್ಧ ಮುಂಬೈ ಪರ 154 ಎಸೆತಗಳಲ್ಲಿ 203 ರನ್ ಗಳಿಸಿದ್ದರು. ಅಂದಿನಿಂದ ಜೈಸ್ವಾಲ್ ಅವರು ಕ್ರಿಕೆಟ್ನಲ್ಲಿ ವೇಗವಾಗಿ ಬೆಳೆಯುತ್ತಿದ್ದು, ಅಂಡರ್ -19 ವಿಶ್ವಕಪ್ ತಂಡಕ್ಕೆ ಜೈಸ್ವಾಲ್ ಅವರನ್ನು ಸೇರಿಸಿಕೊಳ್ಳುವುದು ಅಚ್ಚರಿಯ ಸಂಗತಿಯಲ್ಲ.
ಭಾನುವಾರ ನಡೆಯಲಿರುವ ಅಂಡರ್ -19 ವಿಶ್ವಕಪ್ ಫೈನಲ್ನಲ್ಲಿ ಭಾರತ ನ್ಯೂಜಿಲೆಂಡ್ ಅಥವಾ ಬಾಂಗ್ಲಾದೇಶ ತಂಡವನ್ನು ಎದುರಿಸಲಿದೆ. ಹೀಗಾಗಿ ಜೈಸ್ವಾಲ್ ಅವರು ತಮ್ಮ ಉದ್ದೇಶವನ್ನು ಈಡೇರಿಸಲಿದ್ದಾರೆ ಎಂಬುದು ಎಲ್ಲರ ಆಶಯ. ಈಗಾಗಲೇ ಯಶಸ್ವಿ ಜೈಸ್ವಾಲ್ ಅವರು ಮುಂಬರುವ ಐಪಿಎಲ್ಗೆ ಆಯ್ಕೆಯಾಗಿದ್ದು ರಾಜಸ್ಥಾನ್ ರಾಯಲ್ಸ್ ಪರ ಆಡಲಿದ್ದಾರೆ.